ಅತೃಪ್ತ ಶಾಸಕರು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬಾರದು: ಡಿ.ಕೆ.ಶಿವಕುಮಾರ್

Update: 2019-07-17 12:14 GMT

ಬೆಂಗಳೂರು, ಜು.17: ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗದೆ, ಮುಖ್ಯಮತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ವಿಶ್ವಾಸಮತ ಯಾಚನೆ ವೇಳೆ ಹಾಜರಾಗಬೇಕೆಂದು ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅತೃಪ್ತ ಶಾಸಕರು ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಸಭಾಧ್ಯಕ್ಷರಿಗೆ ಇರುವ ಅಧಿಕಾರ ಏನೆಂಬುದನ್ನೇ ನ್ಯಾಯಾಲಯ ತಿಳಿಸಿದೆ. ಶಾಸಕರು ಕಲಾಪಕ್ಕೆ ಹೋಗಬಹುದು, ಬಿಡಬಹುದು. ಆದರೆ, ಯಾವುದೇ ಪಕ್ಷದ ಕೈಯಲ್ಲಿ ವಿಪ್ ಅಧಿಕಾರ ಇದ್ದೇ ಇರುತ್ತದೆ ಎಂಬುದನ್ನು ಅತೃಪ್ತ ಶಾಸಕರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಶಾಸಕನಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಕೋರ್ಟ್ ಕಾನೂನಿನಲ್ಲಿ ಹೇಳಿರುವ ನ್ಯಾಯವನ್ನೇ ಎತ್ತಿ ಹಿಡಿದಿದೆ. ಶಾಸಕರ ಅನರ್ಹತೆ ಎಂಬುದು ವಿಭಿನ್ನ ಕಾನೂನು. ಒಂದು ಬಾರಿ ಅನರ್ಹರಾದರೆ ಮತ್ತೊಂದು ಬಾರಿ ಚುನಾವಣೆಯಲ್ಲಿ ಗೆಲ್ಲುವವರೆಗೂ ಮಂತ್ರಿಯಾಗಲು ಸಾಧ್ಯವೇ ಇಲ್ಲ. ಹೀಗಾಗಿ ಅತೃಪ್ತ ಶಾಸಕರು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬಾರದು ಎಂದು ಅವರು ಹೇಳಿದರು.

ನಾನು ಇವತ್ತಿಗೂ ರಾಜೀನಾಮೆ ಕೊಟ್ಟವರನ್ನು ರೆಬಲ್ ಎಂದು ಒಪ್ಪಿಕೊಳ್ಳುವುದಿಲ್ಲ. ಅವರೆಲ್ಲ ನನ್ನ ಸ್ನೇಹಿತರೆ. ನಿಮ್ಮ ಕ್ಷೇತ್ರದ ಜನರ ಮುಖ ನೋಡಿ. ಕುಟುಂಬದವರ ಮುಖ ನೋಡಿ. ಬೇರೆಯವರನ್ನು ನಂಬಿ ಹೋಗಬೇಡಿ. ಮಂಗನ ಟೋಪಿ ಹಾಕುತ್ತಾರೆ. ಹೀಗಾಗಿ ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗಲಿ. ಇದನ್ನು ನಾನು ಮಾಧ್ಯಮಗಳ ಮುಖಾಂತರ ಅವರಲ್ಲಿ ಮನವಿ ಮಾಡುತ್ತೇನೆ.

-ಡಿ.ಕೆ.ಶಿವಕುಮಾರ್, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News