ಶಾಸಕಾಂಗದಲ್ಲಿ ನ್ಯಾಯಾಲಯದ ಹಸ್ತಕ್ಷೇಪ: ದಿನೇಶ್‌ ಗುಂಡೂರಾವ್

Update: 2019-07-17 15:08 GMT

ಬೆಂಗಳೂರು, ಜು.17: ಸುಪ್ರೀಂಕೋರ್ಟ್ ಒಂದು ಕಡೆ ಸ್ಪೀಕರ್ ಅವರ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ. ಆದರೆ, ಅದರ ಮಧ್ಯಂತರ ತೀರ್ಪಿನಲ್ಲಿರುವ ಕೆಲವು ಅಂಶಗಳು ಶಾಸಕಾಂಗದಲ್ಲಿ ನ್ಯಾಯಾಲಯದ ಅನಾವಶ್ಯಕ ಹಸ್ತಕ್ಷೇಪ ಕಂಡು ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ, ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಬಂಡಾಯ ಶಾಸಕರು ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ ಎಂದರು.

ನಮ್ಮ ಪಕ್ಷದ ಚಿನ್ನೆಯಿಂದ ಗೆದ್ದಿರುವ ನಮ್ಮ ಶಾಸಕರಿಗೆ ವಿಪ್ ನೀಡುವ ಅಧಿಕಾರ ನಮಗಿದೆ. ಆದರೆ, ಅಧಿವೇಶನಕ್ಕೆ ಬರಲೇಬೇಕು ಎಂದು ಶಾಸಕರಿಗೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳುತ್ತದೆ. ಇದರಿಂದಾಗಿ, ಅತೃಪ್ತ ಶಾಸಕರಿಗೆ ವಿಪ್ ನೀಡಬೇಕೋ, ಬೇಡವೋ ಎಂಬುದರ ಕುರಿತು ಸ್ಪಷ್ಟನೆಯಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅತೃಪ್ತ ಶಾಸಕರು ಅನರ್ಹರಾಗುತ್ತಾರೆ ಅನ್ನೋ ವಿಚಾರದ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಈ ಸರಕಾರ ಬೀಳಬೇಕು ಅಷ್ಟೇ ಬೇಕಾಗಿರುವುದು. ನಮ್ಮ ಪಕ್ಷದ ಶಾಸಕರಿಗೆ ವಿಪ್ ನೀಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸುಪ್ರೀಂಕೋರ್ಟ್ ಆದೇಶವು ಕುದುರೆ ವ್ಯಾಪಾರ ನಡೆಸುವವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ದೂರಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತು ನಾವು ಯಾವುದೇ ಚರ್ಚೆ ಮಾಡಿಲ್ಲ. ಇದೇಲ್ಲ ಕೇವಲ ಊಹಾಪೋಹ ಮಾತ್ರ. ಈ ಬಗ್ಗೆ ನಮ್ಮ ಮುಂದೆ ಯಾವ ಪ್ರಸ್ತಾವವು ಇಲ್ಲ. ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದಿದೆಯೇ ಹೊರತು, ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News