ಸರಕಾರದ ದುಸ್ಥಿತಿಗೆ ಮೈತ್ರಿ ನಾಯಕರ ಬೇಜವಾಬ್ದಾರಿ ಕಾರಣ: ಎಚ್.ವಿಶ್ವನಾಥ್

Update: 2019-07-17 16:26 GMT

ಬೆಂಗಳೂರು, ಜು.17: ರಾಜ್ಯದ ಮೈತ್ರಿ ಸರಕಾರದ ಇಂದಿನ ದುಸ್ಥಿತಿಗೆ ರಾಜೀನಾಮೆ ನೀಡಿರುವ ಶಾಸಕರು ಕಾರಣರಲ್ಲ, ಇದಕ್ಕೆ ರಾಜ್ಯದ ಮೈತ್ರಿ ಸರಕಾರದ ನಾಯಕರ ಬೇಜವಾಬ್ದಾರಿ ಕಾರಣ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಅಸ್ಥಿರ ಸರಕಾರ ಆಡಳಿತ ನಡೆಸುತ್ತಿದೆ. ಸರಕಾರ ಹಾಗೂ ಅಭಿವೃದ್ಧಿ ಕೆಲಸಗಳು ಹಳಿ ತಪ್ಪಿದೆ. ಸಂಪನ್ಮೂಲಗಳ ಸಮಾನ ಹಂಚಿಕೆ ಆಗುತ್ತಿರಲಿಲ್ಲ ಎಂದು ದೂರಿದರು. ಈ ಸರಕಾರದಲ್ಲಿ ಶಾಸಕರಿಗೆ ಕಿಂಚಿತ್ತೂ ಗೌರವವಿಲ್ಲ. ಆದುದರಿಂದ, ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು ಸರಕಾರದ ವಿರುದ್ಧ ಬಂಡೆದಿದ್ದಾರೆ. ಮೈತ್ರಿ ಸರಕಾರದ ಬೇಜವಾಬ್ದಾರಿ ನೀತಿಯೇ ಇದಕ್ಕೆಲ್ಲ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮೈತ್ರಿ ಸರಕಾರಕ್ಕೆ ಯಾವುದೇ ಕಾಳಜಿ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಅನ್ನೋದು ನಿಂತ ನೀರಾಗಿದೆ. ಬರಗಾಲ ಸೇರಿದಂತೆ ಯಾವುದೇ ವಿಚಾರವನ್ನು ಈ ಸರಕಾರ ಸಮರ್ಥವಾಗಿ ನಿಭಾಯಿಸಿಲ್ಲ ಎಂದು ವಿಶ್ವನಾಥ್ ಕಿಡಿಗಾರಿದರು.

ಅಸ್ಥಿರಗೊಂಡಿರುವ ಸರಕಾರದಿಂದ ಯಾವ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ. ಇದೇ ಕಾರಣಕ್ಕಾಗಿ ಒಂದು ಸುಭದ್ರ ಸರಕಾರದ ರಚನೆಯ ಆಶಯಕ್ಕಾಗಿ ಎಲ್ಲ ಅತೃಪ್ತ ಶಾಸಕರು ಹೋರಾಟ ಮಾಡುತ್ತಿದ್ದೇವೆ. ಇವತ್ತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮ್ಮ ಹೋರಾಟಕ್ಕೆ ಸಿಕ್ಕಿರುವ ಜಯವಾಗಿದೆ ಎಂದು ವಿಶ್ವನಾಥ್ ಹೇಳಿದರು.

ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ: ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ನಾವು ಸದನದಲ್ಲಿ ಹಾಜರಾಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಮ್ಮ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಅತೃಪ್ತ ಶಾಸಕರು ಸಂದೇಶ ನೀಡಿದ್ದಾರೆ.

ಅತೃಪ್ತ ಶಾಸಕರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸುಪ್ರೀಂಕೋರ್ಟ್‌ನ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿದ್ದು, ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ನಿರ್ಣಯದಿಂದ ಹಿಂದಕ್ಕೆ ಸರಿಯುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನಾವು ನಾಳೆ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News