ಬಿಜೆಪಿ ಸಹಜವಾಗಿ ಬಹುಮತ ಪಡೆಯಲಿದೆ: ಕೋಟಾ ಶ್ರೀನಿವಾಸ ಪೂಜಾರಿ

Update: 2019-07-17 16:33 GMT

ಬೆಂಗಳೂರು, ಜು.17: ಗುರುವಾರ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡಲು ಮೈತ್ರಿ ಸರಕಾರಕ್ಕೆ ಸಾಧ್ಯವಾಗುವುದಿಲ್ಲ. ಅವರು ಸಹಜವಾಗಿಯೇ ಅಧಿಕಾರ ಕಳೆದುಕೊಳ್ಳಲಿದ್ದು, ಬಿಜೆಪಿಗೆ ಬಹುಮತ ಪಡೆಯುವ ಅವಕಾಶವಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಭಾರತೀಯ ಜನತಾ ಪಕ್ಷ ಸ್ವಾಗತಿಸುತ್ತದೆ. ಕೆಲ ಕಾಂಗ್ರೆಸ್ ನಾಯಕರು ಅತೃಪ್ತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅನರ್ಹ ಮಾಡುತ್ತೇವೆಂದು ಹೆದರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಆದುದರಿಂದ ಮೈತ್ರಿ ನಾಯಕರಿಗೆ ಇದು ಶೋಭೆ ತರುವಂತದ್ದಲ್ಲ. ಸಿಎಂ ಕುಮಾರಸ್ವಾಮಿ ಸರಕಾರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ, ಅವರು ತಮ್ಮ ಸ್ಥಾನ್ಕಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಾನು ಮಿಂಟೋ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆಯಿಂದ 23 ಜನರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಘಟನೆ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದ ಅವರು, ಸಂಬಂಧಪಟ್ಟ ಸಚಿವರು ಇದುವರೆಗೂ ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ. ಸರಕಾರವೂ ದೃಷ್ಟಿ ಕಳೆದುಕೊಂಡಿದೆ. ಸರಕಾರವೇ ಇಲ್ಲ. ಆದರೆ ಇಲಾಖೆ ಇದೆ, ನಿರ್ದೇಶಕರು ಇದ್ದಾರೆ. ಅವರಾದರು ಕ್ರಮ ಕೈಗೊಳ್ಳಬೇಕು. ಸರಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News