ಪ್ರತೀ ಬರಪೀಡಿತ ತಾಲೂಕಿನಲ್ಲಿ ಜಾನುವಾರು ಶಿಬಿರ ಸ್ಥಾಪಿಸಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2019-07-17 17:17 GMT

ಬೆಂಗಳೂರು, ಜು.17: ರಾಜ್ಯದ 65 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವುದರ ಜೊತೆಗೆ ಈ ಎಲ್ಲ ತಾಲೂಕಿನಲ್ಲೂ ಒಂದೊಂದು ಜಾನುವಾರು ಶಿಬಿರ ಸ್ಥಾಪಿಸಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಈ ಕುರಿತು ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ.ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮುರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಾದಿಸಿದ ವಕೀಲ ಡಿ.ನಾಗರಾಜ್ ಅವರು, ತಮಿಳುನಾಡು, ಆಂಧ್ರಪ್ರದೇಶ ಸೇರಿ ಇತರೆ ರಾಜ್ಯಗಳಲ್ಲಿ ಬರಗಾಲ ಪೀಡಿತ ತಾಲೂಕಿನಲ್ಲಿ ಪ್ರತಿ ಜಾನುವಾರಿಗೆ 6 ಕೆಜಿ ಒಣ ಮೇವು, 8 ಕೆಜಿ ಹಸಿ ಮೇವು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಪ್ರತಿ ಜಾನುವಾರಿಗೆ 5 ಕೆಜಿ ಮೇವನ್ನು ಒದಗಿಸಲಾಗುತ್ತಿದ್ದು, 27 ಜಾನುವಾರು ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು 2018ರ ಡಿಸೆಂಬರ್‌ನಲ್ಲಿ ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ 165 ಬರಪೀಡಿತ ತಾಲೂಕುಗಳಲ್ಲಿ ಆರು ತಿಂಗಳುಗಳ ಕಾಲ 153 ಜಾನುವಾರು ಶಿಬಿರಗಳನ್ನು ಸ್ಥಾಪಿಸಬೇಕೆಂದು ತೀರ್ಮಾನ ಕೈಗೊಂಡಿದೆ. ಆದರೆ, ಸರಕಾರ ಬರೀ 27 ಜಾನುವಾರು ಶಿಬಿರಗಳನ್ನು ಸ್ಥಾಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬರಗಾಲಪೀಡಿತ ತಾಲೂಕಿನಲ್ಲಿ ಒಂದೊಂದು ಜಾನುವಾರು ಶಿಬಿರಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದ ನ್ಯಾಯಪೀಠವು ಶುಕ್ರವಾರ ಮಧ್ಯಂತರ ಆದೇಶ ನೀಡಲಾಗುವುದು ಎಂದು ಹೇಳಿತು.

ರಾಜ್ಯದಲ್ಲಿ 75 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಬರಗಾಲ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿವೆ. ಆದರೆ, ನೀವು ಹೇಳುವಂತೆ ಬರೀ 33 ಸಾವಿರ ಜಾನುವಾರುಗಳಿಗೆ ಮೇವನ್ನು ಒದಗಿಸುತ್ತಿದ್ದಿರಿ. ಹಾಗಾದರೆ ಉಳಿದ ಜಾನುವಾರುಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿತು. ಅರ್ಜಿದಾರ ಎ.ಮಲ್ಲಿಕಾರ್ಜುನ ಅವರು ವಾದಿಸಿ, ಬರಗಾಲ ಪೀಡಿತ ತಾಲೂಕುಗಳ ಕೇಂದ್ರದಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವನ್ನು ಶೇಖರಿಸಿಟ್ಟಿಲ್ಲ. ಮಹಾರಾಷ್ಟ್ರ ಸರಕಾರ ಪ್ರತಿ ಜಾನುವಾರುವೊಂದಕ್ಕೆ 18 ಕೆಜಿ ಮೇವನ್ನು ನೀಡುವುದರ ಜೊತೆಗೆ ಶಕ್ತಿ ಬರುವಂತಹ ಆಹಾರವನ್ನೂ ನೀಡಲಾಗುತ್ತದೆ. ಆದರೆ ರಾಜ್ಯದಲ್ಲಿ ಸ್ಥಾಪಿಸಿರುವ ಶಿಬಿರಗಳನ್ನೂ ಮುಚ್ಚಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಬರಗಾಲ ಇರುವ ಪ್ರತಿ ತಾಲೂಕಿನಲ್ಲಿ ಜಾನುವಾರು ಶಿಬಿರ ಸ್ಥಾಪಿಸಲು ಸೂಚಿಸಿ, ಮಧ್ಯಂತರ ಆದೇಶವನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News