ಮೈತ್ರಿ ಸರಕಾರ ಅಸ್ಥಿರಕ್ಕೆ ಕುಟಿಲ ಪ್ರಯತ್ನ: ಸಿದ್ದರಾಮಯ್ಯ

Update: 2019-07-18 15:08 GMT

ಬೆಂಗಳೂರು, ಜು.18: ರಾಜ್ಯದಲ್ಲಿ ಸಂವಿಧಾನ ಬದ್ಧವಾಗಿ ರಚನೆಯಾಗಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕುಟಿಲ ಪ್ರಯತ್ನಗಳನ್ನು ನಡೆಸಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವದ ಸಂದರ್ಭದಲ್ಲಿ ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ, ಮೈತ್ರಿ ಸರಕಾರ ಅಸ್ಥಿರಗೊಳಿಸುವ ಪ್ರಯತ್ನದ ಹಿಂದೆ ಬಿಜೆಪಿ ಇದೆ ಎಂದು ಪರೋಕ್ಷವಾಗಿ ಆರೋಪಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಮಂದಿ ಶಾಸಕರನ್ನು ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯುವ ಮೂಲಕ ಅವರು ಸದನಕ್ಕೆ ಬರದಂತೆ ತಡೆ ಹಿಡಿದಿರುವುದು ಯಾರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಅಧಿಕಾರಕ್ಕೆ ಬರುವ ಆತುರ. ವಿಧಾನಸೌಧದ 3ನೆ ಮಹಡಿಯಲ್ಲಿ ಕೂರಲು ಪ್ರಯತ್ನ ನಡೆಸುತ್ತಿದ್ದಾರೆಂದು ಟೀಕಿಸಿದರು.

ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ದೇಶ ಗಮನಿಸುತ್ತಿದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಆಗಬೇಕಿದೆ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಜನರಿಗೆ ಗೊತ್ತಾಗಲಿ ಎಂದ ಅವರು, ರಾಜಕೀಯ ಶುದ್ಧೀಕರಣ ಮಾಡಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಿದೆ ಎಂದರು.

ಒಬೊಬ್ಬರೆ ಬಂದು ರಾಜೀನಾಮೆ ನೀಡಿಲ್ಲ. ಬದಲಿಗೆ ಎಲ್ಲರೂ ಗುಂಪಾಗಿ ಬಂದು ರಾಜೀನಾಮೆ ನೀಡಿದ್ದು, ಗುಂಪಾಗಿಯೇ ಇದ್ದಾರೆ. ಕಾಂಗ್ರೆಸ್-ಜೆಡಿಎಸ್‌ನ ಹಲವು ಶಾಸಕರು ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವಾಸಮತ ಸರಿಯಲ್ಲ ಎಂದು ಆಕ್ಷೇಪಿಸಿದರು.

ಒಂದೇ ದಿನ ಮೂರು ಬಾರಿ ಪಕ್ಷಾಂತರ: ಹರಿಯಾಣದ ಗಯಾಲಾಲ್ ಎಂಬ ವ್ಯಕ್ತಿ 1967ರಲ್ಲಿ ಒಂದೇ ದಿನ ಮೂರು ಬಾರಿ ಪಕ್ಷಾಂತರ ಮಾಡುತ್ತಾರೆ. ಆ ಸಂದರ್ಭದಲ್ಲಿ ರಾಜೀವ್‌ಗಾಂಧಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಚರ್ಚೆ ಆರಂಭಿಸುತ್ತಾರೆಂದು ಸಿದ್ದರಾಮಯ್ಯ ಸ್ಮರಿಸಿದರು.

ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಬುಡವನ್ನೆ ಅಲುಗಾಡಿಸುತ್ತಿದೆ. ಜತೆಗೆ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣ ಕಲುಷಿತಗೊಳಿಸುತ್ತಿದೆ ಎಂಬ ಕಾರಣಕ್ಕೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಈ ಬಗ್ಗೆ ಸರಿಯಾದ ತೀರ್ಮಾನ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಕ್ರಿಯಾಲೋಪಕ್ಕೊಂದು ‘ಪಾಯಿಂಟ್ ಆಫ್ ಆರ್ಡರ್’

‘ಸದನ ನಿಯಮಗಳನ್ನು ಬಿಟ್ಟು ನಡೆಯುತ್ತಿದೆ. ಅನಗತ್ಯ ವಿಚಾರಗಳ ಪ್ರಸ್ತಾಪ ಹಾಗೂ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸ್ಪಷ್ಟಣೆ ಕೋರಿ ಸದನದಲ್ಲಿ ‘ಕ್ರಿಯಾಲೋಪ’ ಎತ್ತುವುದಕ್ಕೆ ಅವಕಾಶವಿದೆ. ಅದೇ ರೀತಿ ವಿಶ್ವಾಸಮತದ ವೇಳೆ ಶೆಡ್ಯೂಲ್ 10ರ ಬಗ್ಗೆ ಸಿಎಂ ಪ್ರಸ್ತಾಪ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದು, ಚರ್ಚೆಗೆ ಗ್ರಾಸವಾಯಿತು. ಇದು ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೂ ಕಾರಣವಾಯಿತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News