ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕಲು ಆಗ್ರಹ: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ

Update: 2019-07-18 16:10 GMT

ಬೆಂಗಳೂರು, ಜು.18: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತ ನಿರ್ಣಯದ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸೂಚಿಸಿ, ರಾಜ್ಯಪಾಲ ವಜುಭಾಯಿ ವಾಲಾ, ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್‌ಗೆ ಕಳುಹಿಸಿದ ಸಂದೇಶವು ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತು.

ರಾಜ್ಯ ಸರಕಾರವು ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದೆ ಅನಗತ್ಯವಾಗಿ ಕಾಲಹರಣ ಮಾಡುತ್ತಿದೆ. ಆದುದರಿಂದ, ಈ ಸಂಬಂಧ ಮಧ್ಯಪ್ರವೇಶಿಸಿ ಸ್ಪೀಕರ್‌ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡುವಂತೆ ಕೋರಿ ಪ್ರತಿಪಕ್ಷ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಇವತ್ತಿನ ಕಲಾಪದ ಸಂಪೂರ್ಣ ಮಾಹಿತಿಯನ್ನು ಪಡೆಯಲು ತಮ್ಮ ಕಾರ್ಯದರ್ಶಿಯನ್ನು ಸ್ಪೀಕರ್ ಬಳಿ ಕಳುಹಿಸಿದ್ದರು. ಸಂಜೆ 4.30ರ ಸುಮಾರಿಗೆ ವಿಶ್ವಾಸಮತ ನಿರ್ಣಯದ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸೂಚಿಸಿ ರಾಜ್ಯಪಾಲರು ಕಳುಹಿಸಿದ್ದ ಸಂದೇಶವನ್ನು ಸ್ಪೀಕರ್ ಸದನದ ಗಮನಕ್ಕೆ ತಂದರು. ಈ ವಿಚಾರವು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ ಪತ್ಯಾರೋಪಕ್ಕೆ ಕಾರಣವಾಯಿತು.

ಈ ವೇಳೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಂವಿಧಾನದ ಕಲಂ 175(2) ಅಡಿಯಲ್ಲಿ ರಾಜ್ಯಪಾಲರು ಸ್ಪೀಕರ್‌ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ರಾಜ್ಯಪಾಲರು ಸಂದೇಶ ಕಳುಹಿಸಿದ್ದಾರೆ, ನಿರ್ದೇಶನ ನೀಡಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ವಿಶ್ವಾಸಮತದ ಪ್ರಕ್ರಿಯೆ ಆರಂಭವಾಗಿದೆ. ಇದು ಸದನದ ಸೊತ್ತು. ರಾಜ್ಯದ ಭವಿಷ್ಯ ನಿರ್ಣಯಿಸುವ ವಿಶ್ವಾಸಮತದ ಬಗ್ಗೆ ಸದನದ ಅಭಿಪ್ರಾಯ ಹೇಳುವುದು ಎಲ್ಲ ಸದಸ್ಯರ ಹಕ್ಕು. ಅದನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದರು.

ಸದನದಲ್ಲಿ ಸದಸ್ಯರ ಹಕ್ಕು ಮೊಟಕುಗೊಳಿಸದಂತೆ ರಕ್ಷಣೆ ನೀಡಬೇಕು. ಸದನದ ಕಾರ್ಯಕಲಾಪ ನಡೆಯುತ್ತಿದೆ. ಎಲ್ಲ ವಿಚಾರಗಳು ಚರ್ಚೆಯಾಗುತ್ತದೆ ಎಂದು ಕೃಷ್ಣಭೈರೇಗೌಡ ಹೇಳಿದರು. ಈ ವೇಳೆ ಮಾತನಾಡಿದ ಸ್ಪೀಕರ್, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ, ಯಾರಿಗೆ ದಾಹ ಇದೆಯೋ, ಯಾರು ನೀರು ಕುಡಿಯುತ್ತಾರೋ ನನಗೆ ಗೊತ್ತಿಲ್ಲ. ನಾನು ಕಾನೂನು ತಜ್ಞರ ಸಲಹೆ ಪಡೆದು ಅದರಂತೆ ಮುಂದುವರೆಯುತ್ತೇನೆ ಎಂದರು.

ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಮಾತನಾಡಿ, ಸದನದ ಕಲಾಪಗಳಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ. ಸ್ಪೀಕರ್‌ಗೆ ಇದೇ ರೀತಿ ಮಾಡುವಂತೆ ಸೂಚಿಸುವ ಅಧಿಕಾರವನ್ನು ಸಂವಿಧಾನ ರಾಜ್ಯಪಾಲರಿಗೆ ನೀಡಿಲ್ಲ ಎಂದರು.

ನಂತರ ಮಾತು ಮುಂದುವರೆಸಿದ ಕೃಷ್ಣಭೈರೇಗೌಡ, ಈ ಸದನ ಕೈಗೊಳ್ಳುವ ನಿರ್ಣಯ ಸಿಂಧುತ್ವವವನ್ನು ಹೊಂದಿರಬೇಕು. ನಾಳೆ ಯಾರೂ ಇದನ್ನು ಪ್ರಶ್ನಿಸುವಂತಿರಬಾರದು. ಕಾಕತಾಳಿಯವೇನೋ ಬಿಜೆಪಿಯು ಸದನದಲ್ಲಿ ಮಾಡಿದ ಆಗ್ರಹ ಹಾಗೂ ರಾಜ್ಯಪಾಲರು ಈಗ ಕಳುಹಿಸಿರುವ ಸಂದೇಶ ಒಂದೇ ಆಗಿದೆ. ಇದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಇದರಿಂದ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರ ಏರ್ಪಟ್ಟು, ನಿಮ್ಮ ಅನುಕೂಲಕ್ಕೆ ಇದ್ದಾಗ ರಾಜ್ಯಪಾಲರು, ಸುಪ್ರೀಂಕೋರ್ಟ್, ಸ್ಪೀಕರ್ ಎಲ್ಲವು ಮಾನ್ಯ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು 15 ದಿನ ಅವಕಾಶ ನೀಡಿದ್ದರೂ, ರಾತ್ರೋ ರಾತ್ರಿ ಸುಪ್ರೀಂಕೋರ್ಟ್‌ಗೆ ಹೋಗಿ 24 ಗಂಟೆಯೊಳಗೆ ಬಹುಮತ ಸಾಬೀತಿಗೆ ಆದೇಶ ತಂದಾಗ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾಗಿತ್ತಲ್ಲ ಎಂದು ಬಿಜೆಪಿ ಸದಸ್ಯ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರನ್ನು ಕಾಲ ಕಸಕ್ಕಿಂತ ಕಡೆಯಾಗಿ ಕೇವಲ ಮೊಬೈಲ್ ಎಸ್‌ಎಂಎಸ್ ಮೂಲಕ ಸಂದೇಶ ಕೊಟ್ಟು, ನಾಳೆ ಸದನಕ್ಕೆ ಬಂದು ಮತದಾನ ಮಾಡುವಂತೆ ಸ್ಪೀಕರ್ ಕಚೇರಿಯಿಂದಲೇ ಸಂದೇಶ ಬಂದಿತ್ತಲ್ಲ. ಆಗ ಯಾಕೆ ಈ ಸದನದ ಘನತೆ, ಶಾಸಕಾಂಗದ ಗೌರವದ ಬಗ್ಗೆ ನಿಮಗೆ ನೆನಪಾಗಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ಅವರು ಕಿಡಿಗಾರಿದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯಿತು.

ನಮ್ಮ ಎಲ್ಲ ಶಾಸಕರು ಇದೇ ಸದನದಲ್ಲಿ ಇರುತ್ತಾರೆ. ಈ ಸರಕಾರ ವಿಶ್ವಾಸಮತ ಯಾಚನೆ ಮಾಡುವವರೆಗೆ ನಮ್ಮ ಹೋರಾಟ ನಡೆಯುತ್ತದೆ. ಸದನದಲ್ಲಿ ನಮ್ಮ ಅಹೋರಾತ್ರಿ ಧರಣಿ ಮುಂದುವರೆಯಲಿದೆ.

-ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

ವಿಶ್ವಾಸಮತ ಯಾಚಿಸುವಂತೆ ಸೂಚಿಸಿ ರಾಜ್ಯಪಾಲರು ಸ್ಪೀಕರ್‌ಗೆ ಕಳುಹಿಸಿದ ಸಂದೇಶ ಹಾಗೂ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್‌ರನ್ನು ಬಿಜೆಪಿ ನಾಯಕರು ಅಪಹರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸದನದಲ್ಲಿ ಗದ್ದಲ ಎಬ್ಬಿಸಿದ ಪರಿಣಾಮ, ಸಭಾಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸದನವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News