ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲಿ ನಾವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-07-18 16:40 GMT

ಬೆಂಗಳೂರು, ಜು. 18: ‘ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನನ್ನ ನಾಯಕತ್ವದಲ್ಲಿ ಇರುತ್ತದೋ.. ಹೋಗುತ್ತದೋ.. ಅದು ಮುಖ್ಯವಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಹ ನಾಟಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಆಗಬೇಕಿದೆ’ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ಚರ್ಚೆ ಆರಂಭಿಸಿದ ಅವರು, ‘ವಿಪಕ್ಷ ನಾಯಕರು ಬಹಳ ಆತುರದಲ್ಲಿದ್ದಾರೆ. ಈ ಮೊದಲು ನಡೆದ ವಿಶ್ವಾಸ ಮತ ಯಾಚನೆ ಸಂದರ್ಭಗಳೇ ಬೇರೆ. ಪ್ರಸಕ್ತ ಸಂದರ್ಭವೆ ಬೇರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಕಾರಣಕ್ಕಾಗಿ ವಿಶ್ವಾಸಮತ ಯಾಚಿಸಬೇಕೆಂಬ ಬಗ್ಗೆ ಹೇಳಬೇಕಿದೆ’ ಎಂದರು.

‘ಕಾಂಗ್ರೆಸ್-ಜೆಡಿಎಸ್‌ನ ಕೆಲ ಶಾಸಕರು ಸ್ಪೀಕರ್ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ವೇಳೆ ಐಎಂಎ, ಜಿಂದಾಲ್ ಭೂಮಿ ಮಂಜೂರು ಸೇರಿದಂತೆ ಹಲವು ಹಗರಣಗಳನ್ನು ಪ್ರಸ್ತಾಪಿಸಿದ್ದು, ಸ್ಥಿರ ಸರಕಾರ ಇಲ್ಲ’ ಎಂದು ಆರೋಪಿಸಿದ್ದಾರೆ. ‘ಕೆಲವರಿಗೆ ಮಾನ-ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನನಗೆ ಇನ್ನೂ ಮಾನ-ಮರ್ಯಾದೆ ಇದೆ. ನಮ್ಮ ಶಾಸಕರು, ಸಚಿವರು ಮಾನ, ಮರ್ಯಾದೆಯೊಂದಿಗೆ ಬದುಕುತ್ತಿದ್ದಾರೆ. ಬಿಜೆಪಿ ಮುಖಂಡರಿಗೆ ಮೈತ್ರಿ ಸರಕಾರದ ಮೇಲಷ್ಟೇ ಅಪನಂಬಿಕೆ ಬರುವಂತಹ ವಾತಾವರಣ ನಿರ್ಮಿಸಿಲ್ಲ. ಬದಲಿಗೆ ಸ್ಪೀಕರ್ ಹುದ್ದೆ ಮೇಲೂ ಅಪನಂಬಿಕೆ ಬರುವಂತೆ ನಡೆದುಕೊಂಡಿದ್ದಾರೆ. ರಾಜೀನಾಮೆ ಅಂಗೀಕಾರ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚೆ ಮಾಡಬೇಕಿದೆ. ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಕಲಾಪವೇ ವೇದಿಕೆ ಎಂದರು.

ರಾಜಕೀಯದ ಬಗ್ಗೆ ಅಸಹ್ಯ ಹುಟ್ಟಿಸುವಂತಹ ನಡವಳಿಕೆಗಳು ಸರಿಯಲ್ಲ. 14 ತಿಂಗಳಿಂದ ಮೈತ್ರಿ ಸರಕಾರ ಅಸ್ಥಿರಕ್ಕೆ ಪ್ರಯತ್ನಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ ಅವರು, ಬರ ಪರಿಸ್ಥಿತಿಯ ಬಗ್ಗೆ ಯಾವೆಲ್ಲ ಕ್ರಮ ಕೈಗೊಂಡಿದ್ದೇವೆಂದು ಹೇಳಬೇಕಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜೀವ್ ಗಾಂಧಿ ಅವರನ್ನು ಸ್ಮರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿ ‘ಕೋರ್ಟ್ ಮಧ್ಯಂತರ ಆದೇಶದಿಂದ ವಿಪ್ ನೀಡುವ ನನ್ನ ಹಕ್ಕು ಮೊಟಕಾಗಿದೆ’ ಎಂದು ಸದನದ ಗಮನ ಸೆಳೆದರು.

‘ಅಧಿಕಾರ ಯಾರಿಗೂ ಶಾಶ್ವತವೆಂಬ ಭ್ರಮೆಯಲ್ಲಿ ನಾವೇನೂ ಇಲ್ಲ. ವಿಶ್ವಕ್ಕೆ ಮಾದರಿಯಾದ ಸಂವಿಧಾನ ಮತ್ತು ದೇಶಕ್ಕೆ ಮಾದರಿಯಾದ ಕರ್ನಾಟಕದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಅಗತ್ಯ. ಜನಪ್ರತಿನಿಧಿಗಳು ತಮ್ಮ ಭಾವನೆ ವ್ಯಕ್ತಪಡಿಸಲು ಗಡುವು ವಿಧಿಸುವುದು ಸರಿಯಲ್ಲ’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News