ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ: ವಾಟಾಳ್ ನಾಗರಾಜ್

Update: 2019-07-18 17:26 GMT

ಬೆಂಗಳೂರು, ಜು.18: ರಾಜೀನಾಮೆ ನೀಡಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಗುರುವಾರ ನಗರದ ರಾಜಭವನದ ಬಳಿ ಮಾತನಾಡಿದ ಅವರು, ನಾನೀಗ ಶಾಸನಸಭೆಯ ಸದಸ್ಯನಲ್ಲ. ಈ ಹಿಂದೆ ಶಾಸನ ಸಭೆಯಲ್ಲಿದ್ದೆ. ಸ್ವತಃ ವಿಶ್ವಾಸಮತಯಾಚನೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ. ವಿಧಾನಸಭೆಯ ಸಭಾಧ್ಯಕ್ಷ ರಮೇಶ್ ಕುಮಾರ್ ಸದನವನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಸರಕಾರದಲ್ಲಿ ವಿಶ್ವಾಸ ಆಗಬಹುದು ಅಥವಾ ಆಗದೆಯೂ ಇರಬಹುದು. ಆದರೆ, ರಾಜೀನಾಮೆ ನೀಡಿದವರ ಬಗ್ಗೆ ಹಾಗೂ ಅಧಿಕಾರಕ್ಕಾಗಿ ಆಸೆ ಪಡುತ್ತಿರುವವರ ಕುತಂತ್ರ ಕ್ರಮಗಳ ಕುರಿತು ಚರ್ಚೆ ನಡೆಯಬೇಕು. ಈ ವಿಚಾರ ರಾಜ್ಯದ ಎಲ್ಲ ಜನತೆ ವೀಕ್ಷಿಸುವಂತಾಗಬೇಕು ಎಂದು ಅವರು ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧೆಸಿ ಗೆದ್ದ ಎಲ್ಲ ಸದಸ್ಯರು ಕಡ್ಡಾಯವಾಗಿ ಸದನದಲ್ಲಿ ಇರಬೇಕಾಗಿರುವುದು ಸಂಪ್ರದಾಯ. ಆದರೆ, ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದಿರುವ ಅತೃಪ ಶಾಸಕರು ಮುಂಬೈನಲ್ಲಿದ್ದಾರೆ. ಗೈರು ಹಾಜರಿಯಾಗಿರುವ ಶಾಸಕರ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು. ಅದೇ ರೀತಿ ವಿಪ್ ವಿಚಾರದಲ್ಲಿ ತೀರ್ಮಾನ ಆಗಲೇಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News