ಖಾಸಗಿ ಸುದ್ದಿ ವಾಹಿನಿಗಳ ನಿಯಂತ್ರಣ ವಿಚಾರ: ಮೇಲ್ವಿಚಾರಣಾ ಸಮಿತಿ ರಚಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2019-07-18 18:06 GMT

ಬೆಂಗಳೂರು, ಜು.18: ಖಾಸಗಿ ಸುದ್ದಿ ವಾಹಿನಿಗಳ ನಿಯಂತ್ರಣಕ್ಕೆ ಆರು ತಿಂಗಳಲ್ಲಿ ಜಿಲ್ಲಾ ಕೇಂದ್ರ ಮತ್ತು ರಾಜ್ಯದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿ, ಮಾಹಿತಿ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಇತರೆ ವಾಹಿನಿಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ-1995ರ ಅನುಸಾರ ಜಿಲ್ಲಾ ಕೇಂದ್ರ ಮತ್ತು ರಾಜ್ಯದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಹಾಗೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಬೇಕು. ಆದರೆ, ರಾಜ್ಯ ಸರಕಾರ ಈವರೆಗೆ ಸುದ್ದಿ ವಾಹಿನಿಗಳ ಕಾರ್ಯಕ್ರಮ ನಿಯಂತ್ರಣಕ್ಕೆ ಮೇಲ್ವಿಚಾರಣಾ ಸಮಿತಿ ರಚಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರು ತಿಂಗಳಲ್ಲಿ ಜಿಲ್ಲಾ ಕೇಂದ್ರ ಮತ್ತು ರಾಜ್ಯದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿ, ಮಾಹಿತಿ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News