ಸದನಕ್ಕೆ ಅತೃಪ್ತ ಶಾಸಕರು ಗೈರು

Update: 2019-07-18 18:11 GMT

ಬೆಂಗಳೂರು, ಜು. 18: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರದ ಅಳಿವು-ಉಳಿವು ನಿರ್ಧರಿಸಲಿರುವ ವಿಶ್ವಾಸಮತ ಪ್ರಸ್ತಾವ ಮಂಡನೆ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರು ಸೇರಿದಂತೆ 18 ಮಂದಿ ಶಾಸಕರು ಗೈರು ಹಾಜರಾಗಿದ್ದರು.

ಗುರುವಾರ ವಿಧಾನಸಭೆ ಕಲಾಪ ಬೆಳಗ್ಗೆ 11ಗಂಟೆ ನಿಗದಿಯಂತೆ ಆರಂಭವಾದಾಗ ಬಿಜೆಪಿಯ 105 ಮಂದಿ ಸದಸ್ಯರು ಹಾಜರಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅತೃಪ್ತ ಶಾಸಕರು ಗೈರು ಹಾಜರಾಗಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಶ್ರೀಮಂತ ಪಾಟೀಲ್, ನಾಗೇಂದ್ರ ಹಾಗೂ ಬಿಎಸ್ಪಿ ಶಾಸಕ ಮಹೇಶ್ ಗೈರಾಗಿದ್ದರು.

ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಸದನಕ್ಕೆ ಬಂದಿರಲಿಲ್ಲ. ನಾಗೇಂದ್ರ ಅನಾರೋಗ್ಯದ ಕಾರಣ ನೀಡಿ ಸದನಕ್ಕೆ ಬಂದಿರಲಿಲ್ಲ. ಮಹೇಶ್ ನಿನ್ನೆಯೇ ವಿಧಾನಸಭೆ ಸದನಕ್ಕೆ ಗೈರು ಹಾಜರಾಗುವುದಾಗಿ ಸ್ಪಷ್ಟನೆ ನೀಡಿದ್ದರು.

ಗೈರು ಹಾಜರಾದ ಶಾಸಕರು: ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಕೆ. ನಾರಾಯಣಗೌಡ (ಕೆ.ಆರ್.ಪೇಟೆ), ಎಚ್.ವಿಶ್ವನಾಥ್(ಹುಣಸೂರು), ಬೈರತಿಬಸವರಾಜು(ಕೆ.ಆರ್.ಪುರ), ಎಸ್.ಟಿ.ಸೋಮಶೇಖರ್(ಯಶವಂತಪುರ), ಪ್ರತಾಪ್‌ಗೌಡ ಪಾಟೀಲ್(ಮಸ್ಕಿ), ಶಿವರಾಮ್ ಹೆಬ್ಬಾರ್(ಯಲ್ಲಾಪುರ), ಡಾ.ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ. ಪಾಟೀಲ್ (ಹಿರೇಕೆರೂರು), ಮುನಿರತ್ನ (ರಾಜರಾಜೇಶ್ವರಿ ನಗರ), ಆನಂದ್‌ಸಿಂಗ್ (ವಿಜಯನಗರ), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ರೋಷನ್‌ ಬೇಗ್ (ಶಿವಾಜಿನಗರ), ಎಂ.ಟಿ.ಬಿ.ನಾಗರಾಜ್ (ಹೊಸಕೋಟೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News