ಮಾಟ-ಮಂತ್ರ ಮಾಡುವ ಕುಟುಂಬ ನಮ್ಮದಲ್ಲ: ಸಿಎಂ ಎಚ್ಡಿಕೆ

Update: 2019-07-19 12:49 GMT

ಬೆಂಗಳೂರು, ಜು. 19: ‘ಮಾಟಮಂತ್ರ ಮಾಡಿ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುವಂತಿದ್ದರೆ ಜನರ ಬಳಿಗೆ ಹೋಗುವ ಅಗತ್ಯವೇನಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ವಿಶ್ವಾಸಮತ ಪ್ರಸ್ತಾವ ನಿರ್ಣಯದ ಮೇಲಿನ ಚರ್ಚೆ ಮುಂದುವರಿಸಿ ಮಾತನಾಡಿದ ಕುಮಾರಸ್ವಾಮಿ, ನಮ್ಮ ಕುಟುಂಬ ಮಾಟ-ಮಂತ್ರ ಮಾಡುವ ಕುಟುಂಬವಲ್ಲ. ದೇವರನ್ನು ನಂಬುವ ಕುಟುಂಬ ಎಂದು ಸ್ಪಷ್ಟಪಡಿಸಿದರು.

ಸಚಿವ ರೇವಣ್ಣ ಬಗ್ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೀಡಿದ ಹೇಳಿಕೆ ಉಲ್ಲೇಖಿಸಿದ ಕುಮಾರಸ್ವಾಮಿ, ರೇವಣ್ಣ ಪ್ರತಿನಿತ್ಯವೂ ದೇವಸ್ಥಾನಕ್ಕೆ ತೆರಳುತ್ತಾರೆ. ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಿಂಬೆಹಣ್ಣು ನೀಡುತ್ತಾರೆ. ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಏಲಕ್ಕಿ ಹಾರ ನೀಡುತ್ತಾರೆ. ಹೀಗಾಗಿ ರೇವಣ್ಣ ನಿಂಬೆಹಣ್ಣು ಜೇಬಿನಲ್ಲಿಟ್ಟುಕೊಂಡು ಮತ್ತು ಏಲಕ್ಕಿ ಹಾರವನ್ನು ಕತ್ತಿಗೆ ಹಾಕಿಕೊಂಡಿರುತ್ತಾರೆ. ಇಷ್ಟಕ್ಕೆ ಮಾಟ-ಮಂತ್ರ ಮಾಡುತ್ತಾರೆಂದು ಹೇಳುವುದು ಎಷ್ಟು ಸರಿ. ನಮ್ಮ ಕುಟುಂಬಕ್ಕೆ ದೇವರ ಮೇಲೆ ಭಯ-ಭಕ್ತಿ ಇದೆ. ಹೀಗಾಗಿ ಪೂಜೆ ಮಾಡುತ್ತೇವೆ ಎಂದರು.

ಬಿಜೆಪಿಯವರು ಹಿಂದೂ ಸಂಸ್ಕೃತಿ, ರಾಮನ ಹೆಸರನ್ನು ಹೇಳುತ್ತಾರೆ. ಅವರು ರಾಮನ ಹೆಸರಿನಲ್ಲೆ ಅಧಿಕಾರಕ್ಕೆ ಬಂದವರು. ಅವರು ದೇವಸ್ಥಾನಕ್ಕೆ ಹೋಗುವುದಿಲ್ಲವೇ ಎಂದು ಛೇಡಿಸಿದ ಕುಮಾರಸ್ವಾಮಿ, ನಾವು ದೇವರನ್ನು ನಂಬಿ ಬದುಕುತ್ತಿದ್ದೇವೆ ಎಂದರು.

ನಾನೂ ಇನ್ನೂ ಚೆನ್ನಾಗಿಯೇ ಇದ್ದೇನೆ: ಎಷ್ಟೇ ಕ್ಲಿಷ್ಟ ಪರಿಸ್ಥಿತಿ, ಸವಾಲು ಎದುರಾದರೂ ಎದುರಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ಭೂಮಿ ಮೇಲೆ ಬದುಕಿರುವವರೆಗೂ ತಾವು ಹುಚ್ಚಾಸ್ಪತ್ರೆಗೆ ಸೇರುವ ಸ್ಥಿತಿ ಬರುವುದಿಲ್ಲ. ಕುಮಾರಸ್ವಾಮಿ ಪರಿಸ್ಥಿತಿ ನೋಡಿದರೆ ಹುಚ್ಚಾಸ್ಪ್ರತೆ ಸೇರುವಂತಿದೆ ಎಂದು ಕೆಲವರು ಟೀಕಿಸಿದ್ದಾರೆಂದು ಅವರು ಉಲ್ಲೇಖಿಸಿದರು.

‘ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕೆಂಬ ಆಸೆ ಇಲ್ಲ. ಈ ಸ್ಥಾನ ಅಪ್ರಸ್ತುತ. ನಿಮ್ಮನ್ನು ಆಯ್ಕೆ ಮಾಡಿದ ಜನರಿಗೆ ದ್ರೋಹ ಮಾಡಬೇಡಿ. ನಾನು ಈ ಸ್ಥಾನಕ್ಕೆ ಬಂದ ದಿನವೇ ಇದು ಯಕಶ್ಚಿತ್ ಎಂದು ತಿಳಿದಿದ್ದೇನೆ. ನನಗೆ ಯಾವುದೇ ಆತಂಕವೂ ಇಲ್ಲ ವಿಧಿಯಾಟ. ದೇವರು ಕೊಟ್ಟ ಪದವಿ. ದೇವರ ಇಚ್ಛೆಯಂತೆ ಆಗಲಿ’

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News