ಭಾರೀ ಮಳೆ ಸಾಧ್ಯತೆ: ಕೊಡಗಿನಲ್ಲಿ 'ರೆಡ್ ಅಲರ್ಟ್' ಘೋಷಣೆ

Update: 2019-07-19 14:05 GMT
ಸಾಂದರ್ಭಿಕ ಚಿತ್ರ

ಮಡಿಕೇರಿ, ಜು.19: ಜಿಲ್ಲೆಯಲ್ಲಿ ಜುಲೈ 20 ರಿಂದ 23 ರವರೆಗೆ 204 ಮಿ.ಮೀ ಗಿಂತ ಹೆಚ್ಚು (ರೆಡ್ ಅಲರ್ಟ್) ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.        

ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08272-221077 ಹಾಗೂ ವಾಟ್ಸ್ ಆಪ್ ಸಂಖ್ಯೆ 8550001077 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.    

ಎಲ್ಲಾ ಇಲಾಖೆಯ ಅಧಿಕಾರಿಗಳು ಎನ್‍ಡಿಆರ್‍ಎಫ್ ತಂಡದ ಸಹಕಾರದೊಂದಿಗೆ ಮಳೆಯ ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸಬೇಕು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ.

ಈ ಹಿಂದೆ ಜು.18 ರಿಂದಲೇ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತಾದರೂ ಸಾಧಾರಣ ಮಳೆಯಷ್ಟೇ ಸುರಿದಿದೆ. ಗುರುವಾರ ರಾತ್ರಿ ಮಡಿಕೇರಿಗೆ ಒಂದೂವರೆ ಇಂಚಿನಷ್ಟು ಮಳೆಯಾಗಿದೆ. ಕೊಡಗು-ಕೇರಳ ಗಡಿಭಾಗದ ಕರಿಕೆ ಗ್ರಾಮದಲ್ಲಿ ಗಾಳಿ ಮಳೆಯಾಗಿದ್ದು, ಕೆಲವು ಮರಗಳು ಧರೆಗುರುಳಿ ಹಾನಿಯಾದ ಘಟನೆ ನಡೆದಿದೆ. ಆದರೆ ಜಿಲ್ಲೆಯ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದ್ದು, ಶುಕ್ರವಾರ ಬೆಳಗ್ಗಿನಿಂದಲೇ ತುಂತುರು ಮಳೆಯಾಗುತ್ತಿದ್ದು, ಚಳಿಯ ವಾತಾವರಣವಿದೆ.

ಕರಾವಳಿ ಭಾಗದಲ್ಲಿ ಈಗಾಗಲೇ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೆಲವು ಗಂಟೆ ತಡವಾಗಿಯಾದರೂ ಕೊಡಗಿಗೆ ಭಾರೀ ಮಳೆಯ ಪ್ರವೇಶವಾಗಲಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಕೊಡಗು ಮಳೆ ವಿವರ
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 16.22 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 38.04 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 734.33 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2274.87 ಮಿ.ಮೀ ಮಳೆಯಾಗಿತ್ತು.                              

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News