ರಾಜ್ಯಪಾಲರಿಗೆ ಈಗ ಜ್ಞಾನೋದಯವಾಗಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-07-19 14:53 GMT

ಬೆಂಗಳೂರು, ಜು.19: ರಾಜ್ಯಪಾಲರು ನನಗೆ ಇನ್ನೊಂದು ಪತ್ರ ಬರೆದಿದ್ದಾರೆ. ಅದರಲ್ಲಿ ‘ಕುದುರೆ ವ್ಯಾಪಾರ’ ನಡೆಯುವ ಸಾಧ್ಯತೆ ಕುರಿತು ಪ್ರಸ್ತಾಪ ಮಾಡಿದ್ದಾರೆ. ಬಹುಷಃ ಅವರಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಹಾಗೂ ಸರಕಾರದ ನಡುವಿನ ‘ಎರಡನೆ ಲವ್ ಲೆಟರ್’(ಪ್ರೇಮಪತ್ರ) ಇದಾಗಿದೆ. ಕುದುರೆ ವ್ಯಾಪಾರದ ಬಗ್ಗೆ ಪ್ರಸ್ತಾಪಿಸಿರುವ ರಾಜ್ಯಪಾಲರಿಗೆ ಎಂಟು ಜನ ಶಾಸಕರು ನಿಮ್ಮ ಕಚೇರಿಗೆ ಬಂದು ರಾಜೀನಾಮೆ ನೀಡಿದಾಗ ಇದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ನಗರ ಪೊಲೀಸ್ ಆಯುಕ್ತರನ್ನು ಕರೆಸಿಕೊಂಡು, ರಾಜೀನಾಮೆ ನೀಡಿರುವ ಶಾಸಕರನ್ನು ರಾಜಭವನದಿಂದ ಎಚ್‌ಎಎಲ್ ವಿಮಾನ ನಿಲ್ದಾಣದವರೆಗೆ ಝಿರೋ ಟ್ರಾಫಿಕ್ ಸೌಲಭ್ಯದ ಮೂಲಕ ಕಳುಹಿಸಿಕೊಡುವ ಅಗತ್ಯವೇನಿತ್ತು. ಪೊಲೀಸ್ ಆಯುಕ್ತರನ್ನು ಕರೆದು ಈ ಬಗ್ಗೆ ವಿವರಣೆ ಕೇಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ಝಿರೋ ಟ್ರಾಫಿಕ್ ಅನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಅವರ ಕೋರಿಕೆಯ ಮೇಲೆ ಕೊಡಲಾಗುತ್ತದೆ. ನನಗೆ ಝಿರೋ ಟ್ರಾಫಿಕ್ ಇಲ್ಲ, ನಾನು ಸಾಮಾನ್ಯ ಟ್ರಾಫಿಕ್ ಅಲ್ಲಿ ಪ್ರಯಾಣಿಸುತ್ತೇನೆ. ನೀವು ಸರಕಾರ ನಡೆಸುವವರು ನಗರ ಪೊಲೀಸ್ ಆಯುಕ್ತರನ್ನು ಕರೆಸಿ, ಶಾಸಕರಿಗೆ ಈ ಸೌಲಭ್ಯ ಕೊಡಲು ನಿರ್ದೇಶನ ನೀಡಿದವರು ಯಾರು ಎಂಬುದನು ಪ್ರಶ್ನಿಸಬೇಕಿತ್ತು ಎಂದರು.

ನಂತರ ಮಾತು ಮುಂದುವರೆಸಿದ ಮುಖ್ಯಮಂತ್ರಿ, ಈ ಶಾಸಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಘನಕಾರ್ಯ ಮಾಡಿರುವುದರಿಂದ ರಾಜ್ಯಪಾಲರೇ ಝಿರೋ ಟ್ರಾಫಿಕ್ ಕಲ್ಪಿಸಿಕೊಟ್ಟಿದ್ದಾರೆ. ಇವತ್ತು ನನಗೆ ರಾಜ್ಯಪಾಲರು ಮತ್ತೊಂದು ಸೂಚನೆ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ನಾಟಕಕ್ಕೆ ಇತಿಶ್ರೀ ಹಾಡಬೇಕು ಎಂದು ಅವರು ಹೇಳಿದರು.

ಈ ಪ್ರಕರಣ ಪುನಃ ಮತ್ತೆ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗುವುದು ತಪ್ಪಲ್ಲ. ನೋಡೋಣ ಯಾರು ಮುಖ್ಯಮಂತ್ರಿ, ಸಚಿವರು ಆಗುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್, ಎಲ್ಲ ಕುದುರೆಗಳು ಹೋದ ನಂತರ ಈಗ ಕುದುರೆ ವ್ಯಾಪಾರದ ಬಗ್ಗೆ ನೆನಪಾಗಿದೆ ಎಂದರು.

ನಂತರ ಮಾತು ಮುಂದುವರೆಸಿದ ಕುಮಾರಸ್ವಾಮಿ, ಮಾಧ್ಯಮರಂಗಕ್ಕೂ ದೇಶ ಹಾಗೂ ರಾಜ್ಯದ ಜವಾಬ್ದಾರಿಯಿದೆ. ಪತ್ರಕರ್ತರು, ರಾಜಕೀಯ ವಿಚಾರಗಳ ಬಗ್ಗೆ ಅಂಕಣ ಬರೆಯುವವರು ಒಬ್ಬರು ಇದ್ದಾರೆ. ಅವರು ಅರ್ಧ ಪತ್ರಕರ್ತ, ಅರ್ಧ ರಾಜಕಾರಣಿ. ಇವತ್ತಿನ ಈ ಕೆಲಸದಲ್ಲಿ ಮಾಧ್ಯಮಗಳ ಪ್ರೋತ್ಸಾಹವಿದೆ. ಮುಂದಿನ ದಿನಗಳಲ್ಲಿ ಅವರು ಉತ್ತರದಾಯಿಯಾಗಲಿದ್ದಾರೆ ಎಂದರು.

ಒಂದು ವರ್ಷ ನನಗೆ ಕೆಲಸ ಮಾಡಲು ಬಿಡಲಿಲ್ಲ. ಆರು ಬಾರಿ ಈ ಸರಕಾರ ಬೀಳಿಸಲು ಪ್ರಯತ್ನ ಮಾಡಿದರು. ಏಳನೆ ಬಾರಿ ಸ್ವಲ್ಪ ಯಶಸ್ಸು ಸಾಧಿಸಲು ಮುಂದಾಗಿದ್ದಾರೆ. ಈ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತೋ, ಸರಕಾರ ಬರುತ್ತೋ ನೋಡೋಣ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News