ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

Update: 2019-07-19 16:34 GMT

ಬೆಂಗಳೂರು, ಜು.19: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿರುವ ವಿಶ್ವಾಸಮತ ಯಾಚನೆ ನಿರ್ಣಯದ ಪ್ರಕ್ರಿಯೆಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ವಿಧಾನಸಭೆಯ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮುಂದೂಡಿದರು.

ಶುಕ್ರವಾರ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚನೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿ ರಾಜ್ಯಪಾಲ ವಜುಭಾಯಿ ವಾಲಾ, ನಿನ್ನೆ ರಾತ್ರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅಲ್ಲದೆ, ಇವತ್ತು ಸಹ ತಮ್ಮ ಕಾರ್ಯದರ್ಶಿಯನ್ನು ಸದನಕ್ಕೆ ಕಳುಹಿಸಿದ್ದರು. ಮಧ್ಯಾಹ್ನ 1.30ರ ಗಡುವು ಮೀರುತ್ತಿದ್ದಂತೆ ಬಿಜೆಪಿ ಸದಸ್ಯರು, ರಾಜ್ಯಪಾಲರ ನಿರ್ದೇಶನದಂತೆ ಮುಖ್ಯಮಂತ್ರಿ ವಿಶ್ವಾಸಮತ ಯಾಚಿಸುವಂತೆ ಪಟ್ಟು ಹಿಡಿದರು. ಆದರೆ, ಮುಖ್ಯಮಂತ್ರಿ ಇದಕ್ಕೆ ಮಣಿಯಲಿಲ್ಲ. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು. ಇದರಿಂದ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.

ಮುಖ್ಯಮಂತ್ರಿ 1.30ರ ಗಡುವು ಮೀರಿದ್ದರಿಂದ, ರಾಜ್ಯಪಾಲರು ಮತ್ತೊಂದು ಜ್ಞಾಪನಾ ಪತ್ರವನ್ನು ಕಳುಹಿಸಿ, ಇಂದಿನ ಕಲಾಪ ಮುಗಿಯುವ ಒಳಗಾಗಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು. ನಿನ್ನೆ ಸ್ಪೀಕರ್‌ಗೂ ಈ ಸಂಬಂಧ ರಾಜ್ಯಪಾಲರು ಪತ್ರ ಬರೆದಿದ್ದರು. ಆದರೆ, ನಿನ್ನೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿದ ಸ್ಪೀಕರ್, ಸದನದಲ್ಲಿ ನಡೆದ ಚರ್ಚೆಯ ಮಾಹಿತಿಯನ್ನು ಅವರಿಗೆ ನೀಡಿದರು.

ಈ ಬೆಳವಣಿಗೆಯ ನಡುವೆ ಮುಖ್ಯಮಂತ್ರಿಗೆ ವಿಶ್ವಾಸಮತ ಯಾಚಿಸುವಂತೆ ಗಡುವು ವಿಧಿಸಿರುವ ರಾಜ್ಯಪಾಲರ ನಿರ್ದೇಶನವನ್ನು ಪ್ರಶ್ನಿಸಿ ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಜೊತೆಗೆ, ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸುವ ಸಂಬಂಧ ಉಂಟಾಗಿರುವ ಗೊಂದಲ ಕುರಿತು ಸ್ಪಷ್ಟಣೆ ಕೋರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.

ಬಿಜೆಪಿ ಸದಸ್ಯರಿಗೆ ಪದೇ ಪದೇ ಬಿಎಸ್‌ವೈ ಎಚ್ಚರಿಕೆ: ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಎಷ್ಟೇ ಆರೋಪಗಳನ್ನು ಮಾಡುತ್ತಿದ್ದರೂ, ಯಾರೊಬ್ಬರೂ ಅದಕ್ಕೆ ಪ್ರತಿಕ್ರಿಯಿಸದಂತೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಪದೇ ಪದೇ ತಮ್ಮ ಪಕ್ಷದ ಸದಸ್ಯರಿಗೆ ಸೂಚನೆಗಳನ್ನು ಕೊಡುತ್ತಿದ್ದರು.

ಆಡಳಿತ ಪಕ್ಷಗಳ ಸದಸ್ಯರ ಟೀಕೆಗಳಿಗೆ ಪದೇ ಪದೇ ಪ್ರತಿಕ್ರಿಯಿಸುತ್ತಿದ್ದ ಬಿಜೆಪಿ ಸದಸ್ಯ ಸಿ.ಟಿ.ರವಿ ಬಳಿ ಸ್ವತಃ ಎದ್ದು ಹೋದ ಯಡಿಯೂರಪ್ಪ, ಅವರನ್ನು ಕರೆದು ಕಿವಿಮಾತು ಹೇಳಿ ಬಂದು ತಮ್ಮ ಸ್ಥಾನದಲ್ಲಿ ಕೂತ ಘಟನೆಯು ಜರುಗಿತು.

ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಕೆ?: ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಗೆ ಎರಡು ಬಾರಿ ನಿರ್ದೇಶನ ನೀಡಿದರೂ ವಿಶ್ವಾಸಮತ ಯಾಚನೆ ಮಾಡಲು ಮುಂದಾಗದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ವಜುಭಾಯಿ ವಾಲಾ, ಈ ಸಂಬಂಧ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗೆ ರಾಜ್ಯದ ರಾಜಕೀಯ ವಿದ್ಯಾಮಾನಗಳು ಹಾಗೂ ಸದನದಲ್ಲಿ ನಡೆಯುತ್ತಿರುವ ಚರ್ಚೆಯ ಕುರಿತು ಮಧ್ಯಂತರ ವರದಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯಪಾಲರ ಸಂದೇಶವೋ, ನಿರ್ದೇಶನವೋ ಗೊತ್ತಿಲ್ಲ. ಅವರು ಒಂದಲ್ಲ, ಎರಡು ಬಾರಿ ಹೇಳಿದ್ದಾರೆ. ತರಾತುರಿಯಲ್ಲಿ ನಾನು ಈ ಪ್ರಕ್ರಿಯೆಯನ್ನು ಮುಗಿಸಲು ಸಾಧ್ಯವಿಲ್ಲ. ವಿರೋಧ ಪಕ್ಷದವರಿಗೆ ಅಸಮಾಧಾನ ಆದರೂ ಪರವಾಗಿಲ್ಲ, ನೀವು(ಆಡಳಿತ ಪಕ್ಷ) ಏನು ಅಂದುಕೊಂಡರೂ ಪರವಾಗಿಲ್ಲ, ಸೋಮವಾರ ಶತಾಯ ಗತಾಯ ಇದಕ್ಕೆ ನಾನು ಇತಿಶ್ರೀ ಹಾಡಲೇಬೇಕು. ಇನ್ನು ಹೆಚ್ಚು ಹೊತ್ತು ನಾನು ಇಲ್ಲಿ ಕೂರಲು ಸಾಧ್ಯವಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸೋಮವಾರಕ್ಕೆ ಸದನವನ್ನು ಮುಂದೂಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News