ಸಾ.ರಾ.ಮಹೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಕಾನೂನು ಸಮರ ನಡೆಸುತ್ತೇನೆ: ಎಚ್.ವಿಶ್ವನಾಥ್

Update: 2019-07-19 15:24 GMT

ಬೆಂಗಳೂರು, ಜು.19: ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡು, ರಾಜೀನಾಮೆ ನೀಡಿರುವ ಶಾಸಕ ಎಚ್.ವಿಶ್ವನಾಥ್ ಬಿಜೆಪಿಗೆ ಮಾರಾಟವಾಗಿದ್ದಾರೆಂದು ಸಚಿವ ಸಾ.ರಾ.ಮಹೇಶ್ ಮಾಡಿರುವ ಆರೋಪಕ್ಕೆ ವಿಶ್ವನಾಥ್ ಕಿಡಿಕಾರಿದ್ದು, ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ.

ಶುಕ್ರವಾರ ಖಾಸಗಿ ವಾಹಿನಿ ಜತೆ ಮಾತನಾಡಿದ ಅವರು, ಸಚಿವರಾಗಿ ಸದನದಲ್ಲಿ ಹೀಗೆ ಹೇಳಿಕೆ ನೀಡುವುದು ಸಲ್ಲ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ, ಸಾ.ರಾ.ಮಹೇಶ್ ಮೇಲೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಮಾರಾಟವಾಗಿದ್ದೇನೆ ಎಂಬ ಮಾತು ಸಚಿವ ಸಾ.ರಾ.ಮಹೇಶ್ ಹೇಳಿಲ್ಲ, ಅವರ ಕೈಯಲ್ಲಿ ಹೇಳಿಸಿದ್ದಾರೆ ಎಂದು ಆಪಾದಿಸಿದ ಅವರು, ಕಿಚನ್ ಕ್ಯಾಬಿನೆಟ್ ಇದೆಯಲ್ಲ, ಅವರೇ ಈ ಮಾತು ಹೇಳಿಸಿರುತ್ತಾರೆ. ಅವರ ಹೇಳಿಕೆಯಿಂದ ಮನಸಿಗೆ ತೀರಾ ನೋವಾಗಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಕಾನೂನು ಸಮರ ನಡೆಸುತ್ತೇನೆ ಎಂದು ಎಚ್ಚರಿಸಿದ್ದಾರೆ.

ಸಚಿವ ಸಾ.ರಾ.ಮಹೇಶ್ ಒಬ್ಬ ಜಾತಿವಾದಿ ಮತ್ತು ದುರಹಂಕಾರಿ. ಅವರು ದುರಹಂಕಾರದಿಂದ ಮಾತನಾಡಿದ್ದಾರೆ. ನಾನು ಸದನದಲ್ಲಿ ಗೈರು ಹಾಜರಾಗಿರುವುದು ತಿಳಿದಿದ್ದರೂ, ನನ್ನ ವಿಚಾರದ ಕುರಿತು ಮಾತನಾಡಲು ಅವಕಾಶ ನೀಡಿರುವುದು ಏಕೆ? ಮುಂದೆ ಸದನಕ್ಕೆ ಬಂದಾಗ ಎಲ್ಲವನ್ನೂ ತೆರೆದಿಡುತ್ತೇನೆ’ ಎಂದು ಹೇಳಿದರು.

ನಾನು ಯಾರೆಂದು ತೋರಿಸುತ್ತೇನೆ: 30 ವರ್ಷಗಳ ರಾಜಕೀಯ ಜೀವನದಲ್ಲಿ ಇದು ನನಗೆ ಅತ್ಯಂತ ನೋವಿನ ಸಂಗತಿ. ಈ ಪಕ್ಷದವರು ನೀಡಿರುವ ಸವಾಲನ್ನು ನಾನು ಎದುರಿಸುತ್ತೇನೆ. ನಾನು ಯಾರು ಎಂಬುದನ್ನು ಮುಂದೆ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News