ಆಗುಂಬೆಯಲ್ಲಿ ಶಂಕಿತ ನಕ್ಸಲರಿಂದ ಬಸ್‍ಗೆ ಬೆಂಕಿ ಪ್ರಕರಣ: ಇಬ್ಬರು ದೋಷಮುಕ್ತ, ಓರ್ವನಿಗೆ ಶಿಕ್ಷೆ

Update: 2019-07-19 15:40 GMT

ಶಿವಮೊಗ್ಗ, ಜು. 19: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಕೆಎಸ್‍ಆರ್‍ಟಿಸಿ ಬಸ್‍ಗೆ ಶಂಕಿತ ನಕ್ಸಲೀಯರು ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಆರೋಪ ಮುಕ್ತಗೊಳಿಸಲಾಗಿದ್ದು, ಓರ್ವನಿಗೆ ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಪತ್ರಕರ್ತೆ ಹೆಚ್.ಅನಿತಾ ಹಾಗೂ ಸುರೇಶ್‍ನಾಯ್ಕ್ ಆರೋಪ ಮುಕ್ತಗೊಂಡವರಾಗಿದ್ದಾರೆ. ಕೋರನಕೋಟೆ ಕೃಷ್ಣನಿಗೆ 5 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠರವರು ಈ ತೀರ್ಪು ನೀಡಿದ್ದಾರೆ. ಆಪಾದಿತರ ಪರವಾಗಿ ಪ್ರಗತಿಪರ ಹೋರಾಟಗಾರ, ವಕೀಲ ಕೆ.ಪಿ.ಶ್ರೀಪಾಲ್‍ರವರು ವಾದ ಮಂಡಿಸಿದ್ದರು.

ಘಟನೆ ಹಿನ್ನೆಲೆ: 2007 ರಲ್ಲಿ ಆಗುಂಬೆ ಬಳಿ ಬೆಂಗಳೂರಿಗೆ ಹೋಗುವ ಕೆಎಸ್‍ಅರ್‍ಟಿಸಿ ಬಸ್‍ನ್ನು ಶಂಕಿತ ನಕ್ಸಲಿಯರ ತಂಡ ಸುಟ್ಟ ಹಾಕಿತ್ತು. ಈ ಸಂಬಂಧ ಆಗುಂಬೆ ಪೊಲಿಸ್ ಠಾಣೆಯಲ್ಲಿ ಶಂಕಿತ ನಕ್ಸಲೀಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು.

2008 ರಲ್ಲಿ ಕೊರನಕೋಟೆ ಕೃಷ್ಣನನ್ನು ಬಂಧಿಸಿ, ಆತನ ತಪ್ಪೊಪ್ಪಿಗೆ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ನಾಯ್ಕ ಮತ್ತು ಅನಿತಾರ ಮೇಲೆ ಬಲವಾದ ಯಾವುದೇ ಸಾಕ್ಷಗಳಿಲ್ಲದ್ದನ್ನು ಮನಗಂಡ ತೀರ್ಥಹಳ್ಳಿ ಪ್ರಥಮ ದರ್ಜೆ ನ್ಯಾಯಾಲಯ 2010 ರಲ್ಲಿ ಜಾಮೀನು ಮುಂಜೂರುಗೊಳಿಸಿತ್ತು. ಇದೀಗ ಇವರಿಬ್ಬರನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

'ಮೇಲ್ಮನವಿ ಸಲ್ಲಿಕೆ': ವಕೀಲ ಕೆ.ಪಿ.ಶ್ರೀಪಾಲ್

'ಕೋರನಕೋಟೆ ಕೃಷ್ಣನಿಗೆ ವಿಧಿಸಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಚಿಂತನೆ ನಡೆಸಲಾಗುತ್ತಿದೆ. ಆತನಿಗೆ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದೆ. ಕೋರನಕೋಟೆ ಕೃಷ್ಣ ಅತ್ಯಂತ ಕಡುಬಡವನಾಗಿದ್ದು, ನೆರವಾಗುವವರು ಯಾರು ಇಲ್ಲದಂತ ಸ್ಥಿತಿ ಆತನದ್ದಾಗಿದೆ' ಎಂದು ವಕೀಲ, ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್‍ರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News