ಶಾಸಕರು ನಿಷ್ಕೀಯ ಎಂಬ ಬ್ಲಾಕ್ ಅಧ್ಯಕ್ಷರ ಹೇಳಿಕೆಗೆ ಬಿಜೆಪಿ ಖಂಡನೆ

Update: 2019-07-19 17:49 GMT

ಪುತ್ತೂರು; ಪುತ್ತೂರು ಶಾಸಕರು ಕಳೆದ ಒಂದು ವರ್ಷದಿಂದ ಹಲವಾರು ಆಭಿವೃದ್ಧಿ ಕೆಲಸಗಳನ್ನು ನಡೆಸಿದ್ದಾರೆ. ಪುತ್ತೂರಿನಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಸೂಕ್ತ ಸ್ಪಂದನೆ ನೀಡಿದ್ದಾರೆ. ಇಂತಹ ಕ್ರೀಯಾಶೀಲ ಶಾಸಕರನ್ನು 'ನಿಷ್ಕ್ರೀಯ ಶಾಸಕರು' ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಹೇಳಿಕೆ ನೀಡಿರುವುದನ್ನು ಖಂಡನೀಯವಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪುತ್ತೂರು ಶಾಸಕರು ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲಾಖಾವಾರು ಸಭೆಗಳನ್ನು ನಡೆಸಿದ್ದಾರೆ. ಭ್ರಷ್ಟಾಚಾರ ರಹಿತ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅತ್ಯಾಚಾರದ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮಹಿಳಾ ರಕ್ಷಣೆ ಕುರಿತು ಅಗತ್ಯಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೊಂಬೆಟ್ಟು ಪ್ರೌಢಶಾಲಾ ವಿಭಾಗದ 6 ಮಂದಿ ಉಪನ್ಯಾಸಕರನ್ನು ವರ್ಗಾವಣೆ ನಡೆಸದಂತೆ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ. ಎಂದು ತಿಳಿಸಿದರು.

ಬಹುಮತವೇ ಇಲ್ಲದ ಸರ್ಕಾರ ತರಾತುರಿಯಲ್ಲಿ ಪ್ರಸ್ತುತ ವರ್ಗಾವಣೆ ದಂಧೆ ನಡೆಸುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಬೆಂಬಲ ರಾಜ್ಯ ಸರ್ಕಾರದಿಂದ ಸಿಗುತ್ತಿಲ್ಲ. ಹಾಗಾಗಿ ಈ ಮೈತ್ರಿ ಸರ್ಕಾರದಿಂದ ಬೇರೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ  ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳನ್ನು ತಂದಿರುವುದು ಕಾಂಗ್ರೇಸ್ ಸರ್ಕಾರ ಹಾಗೂ ಈ ಹಿಂದಿನ ಶಾಸಕರು. ಈಗ ಈಗಿನ ಶಾಸಕರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ವಿನಾ ಕಾರಣ ಶಾಸಕರ ಮೇಲೆ ಆರೋಪ ನಡೆಸುವುದು ಸರಿಯಲ್ಲ. ನಿಮ್ಮ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ಸರ್ಕಾರದಿಂದ ಅಭಿವೃದ್ಧಿ ವಿಚಾರಕ್ಕೆ ಸ್ಪಂಧನೆಯೇ ಇಲ್ಲ. ಅಧಿಕಾರಿಗಳ ನೆರವೂ ಇಲ್ಲ ಎಂದವರು ತಿಳಿಸಿದರು. 

ಬೆಟ್ಟಂಪಾಡಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿಯಲ್ಲಿ 4 ಮಂದಿ ಉಪನ್ಯಾಸಕರನ್ನು ಫೆಬ್ರವರಿ ತಿಂಗಳಲ್ಲಿ ವರ್ಗಾವಣೆ ಮಾಡಿರುವ ಸರ್ಕಾರ ಇದೀಗ ಉಳಿದ 4 ಮಂದಿಯನ್ನು ರಾಮನಗರ, ಮೈಸೂರಿಗೆ ವರ್ಗಾವಣೆ ಮಾಡಿ ಗ್ರಾಮೀಣ ಕಾಲೇಜಿಗೆ ಉಪನ್ಯಾಸಕರೇ ಇಲ್ಲದಂತೆ ಮಾಡಿದೆ ಎಂದು ಆರೋಪಿಸಿದ ಅವರು ಕಳೆದ ಒಂದು ವರ್ಷದಿಂದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶಿಕ್ಷಕರೇ ಇಲ್ಲದಂತೆ ಮಾಡಿದ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರ ಸರ್ಟಿಫಿಕೇಟ್ ಶಾಸಕರಿಗೆ ಬೇಕಾಗಿಲ್ಲ. ಜನತೆಯೇ ಅವರಿಗೆ ಬೆಂಬಲ ನೀಡಿದ್ದಾರೆ. ವಿಧಾನಸಭಾ ಚುನಾವಣೆಗಿಂತ ಹೆಚ್ಚು ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಜನತೆ ತಮ್ಮ ನೀಡುವ ಮೂಲಕ ಬಿಜೆಪಿ ಪರ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಗೋಷ್ಟಿಯಲ್ಲಿ ಹಾಜರಿದ್ದ ನಗರಮಂಡಲ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಶಂಭುಭಟ್, ನಗರ ಮಂದಲ ಅಧ್ಯಕ್ಷ ಜೀವಂಧರ್ ಜೈನ್, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರ ಮಂಡಲ ಕಾರ್ಯದರ್ಶಿಗಳಾದ ರಾಮದಾಸ್ ಹಾರಾಡಿ ಮತ್ತು ಗೌರಿ ಬನ್ನೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News