ಚಿಕ್ಕಮಗಳೂರಿನಲ್ಲಿ ಮಳೆ ಚುರುಕು: ಕೃಷಿಕರಲ್ಲಿ ಮಂದಹಾಸ

Update: 2019-07-19 18:20 GMT

ಚಿಕ್ಕಮಗಳೂರು, ಜು.19: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಕಳೆದೊಂದು ವಾರದಿಂದ ಬಿಡುವು ನೀಡಿದ ಮಳೆ ಗುರುವಾರ ರಾತ್ರಿಯಿಂದ ಅಲ್ಲಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. 

ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಸಾಧಾರಣ ಮಳೆಯಾಗುತ್ತಿದ್ದು, ಕೊಪ್ಪ ಸೇರಿದಂತೆ ಜಯಪುರ, ಹರಿಹರಪುರ, ಕಮ್ಮರಡಿ, ಕುದುರೆಗುಂಡಿ ಸುತ್ತಮುತ್ತ ಮಳೆಯಾಗಿದೆ. ತಾಲೂಕಿನಲ್ಲಿ ಹರಿಯುವ ಸೀತಾ, ಕಪಿಲ, ಬ್ರಹ್ಮೀ ಹಾಗೂ ತುಂಗಾ ನದಿ ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಇನ್ನು ಶೃಂಗೇರಿ ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಶೃಂಗೇರಿಯಲ್ಲಿ 72.0 ಮಿ.ಮೀ.,  ಕೆರೆಕಟ್ಟೆಯಲ್ಲಿ 109.0 ಮಿಮೀ., ಹಾಗೂ ಕಿಗ್ಗಾದಲ್ಲಿ 79.5 ಮಿ.ಮೀ. ಮಳೆಯಾಗಿದೆ. ಮಸಿಗೆ, ಬೇಗಾರು, ಕೆರೆಕಟ್ಟೆ, ನೆಮ್ಮೂರು, ಶೃಂಗೇರಿ ಸುತ್ತಮುತ್ತ ಮಳೆಯಾಗಿರುವ ವರದಿಯಾಗಿದೆ. ತುಂಗಾ ನದಿಯ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಏರಿಕೆ ಕಂಡಿದೆ. ತಾಲೂಕಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಹಿನ್ನೆಡೆ ಆಗಿದ್ದು, ಗುರುವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಮತ್ತೆ ಬಿರುಸು ಪಡೆದುಕೊಂಡಿದೆ. 

ಮೂಡಿಗೆರೆ ತಾಲೂಕಿನಲ್ಲಿ ಶುಕ್ರವಾರ ಸಂಜೆಯಿಂದ ಮಳೆಯಾಗುತ್ತಿದ್ದು, ಬೆಳಿಗ್ಗೆಯಿಂದ ಮೋಡ ಕವಿದ ವಾತವರಣವಿತ್ತು. ತಾಲೂಕಿನ ಬಣಕಲ್, ಬಾಳೂರು, ಜಾವಳ್ಳಿ, ಗುತ್ತಿ,  ಬೆಟ್ಟಗೆರೆ, ಗೌಡಳ್ಳಿ, ತುರುವೆ, ದುಂಡಿಗ ಭಾಗದಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ. ನರಸಿಂಹರಾಜಪುರ ತಾಲೂಕಿನ ಸುತ್ತಮುತ್ತ ಮಳೆಯಾಗಿರುವ ವರದಿಯಾಗಿದೆ. ಬಯಲುಸೀಮೆ ಭಾಗವಾದ ಕಡೂರು, ಬೀರೂರು, ಕಡೂರು, ಬೀರೂರು, ಮಚ್ಚೇರಿ, ಮಲೇಶ್ವರ, ಕಸಬ ಭಾಗ, ಎಮ್ಮೆದೊಡ್ಡಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಬೆಳಿಗ್ಗೆಯಿಂದ ಬಿಸಿಲಿನ ವಾತವರಣವಿದ್ದು, ಮಧ್ಯಾಹ್ನದ ನಂತರ ಅಲ್ಲಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ಯಾವುದೇ ಅಹಿತಕರ ಘಟನೆ ಆಗಿರುವ ಬಗ್ಗೆ ವರದಿಯಾಗಿಲ್ಲ. ಜಿಲ್ಲಾದ್ಯಂತ ಮೋಡ ಕವಿದ ವಾತವರಣವಿದ್ದು, ಶನಿವಾರ ಮತ್ತು ರವಿವಾರ ಮಳೆಯಾಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಬರ ತಾಲೂಕು ಎಂದು ಹಣೆ ಪಟ್ಟಿಕಟ್ಟಿಕೊಂಡಿರುವ ಕಡೂರು ಹಾಗೂ ಬೀರೂರು ಭಾಗದಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ. ಮಲೆನಾಡಿನಲ್ಲಿ ಪ್ರಸಕ್ತ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳ ನಡೆಯುತ್ತಿದ್ದು, ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿದ್ದ ಕಾರಣ ಭತ್ತದ ಗದ್ದೆಗಳಲ್ಲಿ ನೀರಿಲ್ಲದೇ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದವು. ಗುರುವಾರ ಸಂಜೆ ಹಾಗೂ ಶುಕ್ರವಾರ ಮಲೆನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಭತ್ತದ ಗದ್ದೆಗಳ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News