ಶೃಂಗೇರಿ: ಶಿಥಿಲಾವಸ್ಥೆಯಲ್ಲಿ ಕಿಕ್ರೆ ಸೇತುವೆ; ದುರಸ್ತಿಗೆ ನಿವಾಸಿಗಳ ಆಗ್ರಹ

Update: 2019-07-19 18:29 GMT

ಶೃಂಗೇರಿ, ಜು.19: ತಾಲೂಕಿನ ಮೆಣಸೆ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕಿಕ್ರೆ ಸೇತುವೆ ಶಿಥಿಲಾವಸ್ಥೆಯ ಹಂತ ತಲುಪಿದ್ದು, ಕೆಲ ದಶಕಗಳಿಂದ ಸೂಕ್ತ ದುರಸ್ತಿ ಕಾಣದ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ, ಸೇತುವೆ ಮೇಲೆಯೇ ನೀರು ಹರಿಯುತ್ತಿದ್ದು, ಭಾರೀ ಮಳೆ ಬಂದಲ್ಲಿ ವಾಹನಗಳೇ ಕೊಚ್ಚಿ ಹೋಗುವ ಭೀತಿ ಗ್ರಾಮಸ್ಥರದ್ದಾಗಿದೆ. 

ತಾಲೂಕಿನ ಕೆಳಕೊಪ್ಪ, ಸಸಿಮನೆ, ಕಿಕ್ರೆ ಎಸ್ಟೇಟ್, ಜೈನರಮಕ್ಕಿ, ಮೇಗಳಬೈಲು, ಹುರುಳಿಹಕ್ಲು ಸಹಿತ ಆನೇಕ ಹಳ್ಳಿಯ ಜನರು ಈ ಸೇತುವೆ ಬಳಸಿ ಸಂಚರಿಸುತ್ತಾರೆ. ಕಳೆದ ಒಂದು ದಶಕಗಳಿಂದಲೂ ಸೇತುವೆ ದುರಸ್ತಿಗೆ ಬೇಡಿಕೆ ಸಲ್ಲಿಸಿದರೂ ಸೇತುವೆಯ ನವೀಕರಣ ಅಥವಾ ನೂತನ ಸೇತುವೆ ನಿರ್ಮಾಣ ಕಾರ್ಯವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಶೃಂಗೇರಿಯಿಂದ ಸುಮಾರು ಐದು ಕಿ.ಮೀ ದೂರದಲ್ಲಿರುವ ಈ ಸೇತುವೆಯನ್ನು ಮಳೆಗಾಲದಲ್ಲಿ ದಾಟಿ ಮನೆಗೆ ತೆರಳಬೇಕಾದರೆ ಅಲ್ಲಿನ ಗ್ರಾಮಸ್ಥರು ಅನುಭವಿಸುವ ಸಂಕಷ್ಟ ದೇವರಿಗೆ ಪ್ರೀತಿ ಎಂಬಂತಾಗಿದೆ. ಬೇಸಿಗೆ ಕಾಲದಲ್ಲಿ ಸಣ್ಣಹಳ್ಳವಾಗಿ ಹರಿಯುವ ಕಿಕ್ರೆಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಬಹಳ ಹಿಂದೆ ನಿರ್ಮಾಣಗೊಂಡ ಕಿರುಸೇತುವೆ ಅವೈಜ್ಞಾನಿಕವಾಗಿದ್ದು, ಕಳಪೆ ಕಾಮಗಾರಿಯಿಂದಾಗಿ ಸೇತುವೆ ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು, ಸೇತುವೆಯ ಅಡಿಯಲ್ಲಿ ನೀರು ಹರಿಯದೇ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿದ್ದು, ಹಳ್ಳದ ನೀರು ಸೇತುವೆಯ ಮೇಲೆಯೇ ಹರಿಯಲಾರಂಭಿಸಿದೆ. ಈ ಸೇತುವೆ ದಾಟಿಕೊಂಡು ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೇಟೆಗೆ ಬರುವ ಗ್ರಾಮಸ್ಥರು, ಆರೋಗ್ಯ ಕೆಟ್ಟಾಗ ಅಸ್ಪತ್ರೆಗೆ ಬರುವ ರೋಗಿಗಳಿಗೆ ಓಡಾಡಲು ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ದೊಡ್ಡಹಳ್ಳ-ಕಿರಿದಾದ ಪೈಪ್: ಕಿಕ್ರೆ ಸೇತುವೆಯ ಹಳ್ಳ ದೊಡ್ಡದಾಗಿದ್ದು, ಸೇತುವೆಯ ಅಡಿಯಲ್ಲಿ ಅಳವಡಿಸಿರುವ ಸಿಮೆಂಟ್ ಪೈಪ್‍ಗಳು ಸಣ್ಣದಾಗಿವೆ. ಕಿರಿದಾದ ಪೈಪಿನ ಕಾರಣ ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತದೆ. ಪೈಪ್ ನಲ್ಲಿ ಕಸಕಡ್ಡಿಗಳು ತುಂಬಿರುತ್ತದೆ. ರಭಸವಾಗಿ ಹಳ್ಳದಲ್ಲಿ ನೀರು ಹರಿಯುವ ಕಾರಣ ಪೈಪ್ ನಲ್ಲಿ ಹೊಕ್ಕಿರುವ ಕಸಕಡ್ಡಿಗಳನ್ನು ಹೊರತೆಗೆಯುವುದು ಅಸಾಧ್ಯ. ಮಲೆನಾಡಿನಲ್ಲಿ ಮಳೆ ಯಾವಾಗ ಹೆಚ್ಚಾಗುತ್ತದೆಯೋ ಗೊತ್ತಾಗುವುದಿಲ್ಲ. ಬೆಳಗ್ಗೆ ನಿಧಾನಗತಿಯಲ್ಲಿ ಬರುವ ಮಳೆ ಸಂಜೆ ಹೊತ್ತಿಗೆ ಅವಾಂತರಗಳನ್ನು ಸೃಷ್ಟಿಸಬಹುದು. ಆಗ ಈ ಸೇತುವೆಯನ್ನು ಹುಚ್ಚು ಧೈರ್ಯದಲ್ಲಿ ದಾಟಬೇಕು. ಕಾರಣ ಸೇತುವೆಗೆ ಕೈಪಿಡಿ ಇಲ್ಲ. ಸೇತುವೆಯ ಕಲ್ಲುಗಳು ಕಿತ್ತು ಹೋಗಿ ಸೇತುವೆ ಅಪಾಯದ ಸ್ಥಿತಿಯಲ್ಲಿದೆ. ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು. ಮಳೆಗಾಲದಲ್ಲಿ ಕಿರಿಕ್ ನೀಡುವ ಕಿಕ್ರೆಹಳ್ಳದ ಸೇತುವೆ ಸಮಸ್ಯೆಗೆ ಶಾಶ್ವತವಾದ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡ ನಾವು ಮಳೆಗಾಲದಲ್ಲಿ ಕೃಷಿಗೆ ಬೇಕಾಗುವ ಗೊಬ್ಬರ ಹಾಗೂ ಮನೆಗೆ ಬೇಕಾಗುವ ಸಾಮಾಗ್ರಿಗಳನ್ನು ಪೇಟೆಗೆ ಹೋಗಿ ತರಬೇಕು. ವೇದಿಕೆಯಲ್ಲಿ ಕೃಷಿಯಿಂದ ದೇಶ ಅಭಿವೃದ್ಧಿ ಎಂದು ದೊಡ್ಡದಾಗಿ ಭಾಷಣ ಮಾಡುವ ದೊಡ್ಡವ್ಯಕ್ತಿಗಳಿಗೆ ಗ್ರಾಮದ ದುಸ್ಥಿತಿ ಅರ್ಥವಾಗುವುದಿಲ್ಲ.ಒಂದು ದಶಕಗಳಿಂದ ಈ ಸೇತುವೆ ದಾಟುವ ನಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವರು ಯಾರೂ ಇಲ್ಲ.
- ಶೇಷಪ್ಪ, ಕೃಷಿಕರು, ಕಿಕ್ರೆ ಗ್ರಾಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News