ಮಹಿಳಾ ಅರಣ್ಯಾಧಿಕಾರಿ ವಿರುದ್ಧದ ಎಸ್‌ಸಿ/ಎಸ್‌ಟಿ ಕಾಯ್ಡೆ ಅಡಿಯ ಪ್ರಕರಣಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ

Update: 2019-07-20 17:28 GMT

ಹೊಸದಿಲ್ಲಿ, ಜು. 21: ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕನ ಸಹೋದರನಿಂದ ದಾಳಿಗೊಳಗಾಗಿ ಗಾಯಗೊಂಡ ತೆಲಂಗಾಣದ ಮಹಿಳಾ ಅರಣ್ಯಾಧಿಕಾರಿ ವಿರುದ್ಧದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ಪ್ರಕರಣದ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಡೆ ನೀಡಿದೆ.

 ಅರಣ್ಯ ವಲಯದ ಮಹಿಳಾ ಅಧಿಕಾರಿ ಸಿ. ಅನಿತಾ ಅವರು ಇತರ ಅಧಿಕಾರಿಗಳೊಂದಿಗೆ ಜೂನ್ 30ರಂದು ಕಾಗಜ್‌ನಗರ್ ಸಮೀಪದ ಗ್ರಾಮಕ್ಕೆ ಗಿಡ ನೆಡಲು ತೆರಳಿದ್ದರು. ಈ ಸಂದರ್ಭ ಸಿರ್ಪುರ ಶಾಸಕ ಕೊನೆರು ಕಣ್ಣಪ್ಪ ಅವರ ಸಹೋದರನ ನೇತೃತ್ವದ ಗುಂಪು ವನಿತಾ ಹಾಗೂ ಸಹ ಅಧಿಕಾರಿಗಳ ಮೇಲೆ ಮೇಲೆ ದಾಳಿ ನಡೆಸಿತ್ತು.

ಜುಲೈ 8ರಂದು ಬುಡಕಟ್ಟು ಮಹಿಳೆಯರು ದೂರು ನೀಡಿ, ನಾವು ನಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನಿತಾ ಹಾಗೂ ಅವರ ಸಹವರ್ತಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಆಧಾರದಲ್ಲಿ ಅನಿತಾ ಅವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಅರಣ್ಯ ಹಾಗೂ ಪರಿಸರ ಸಂಬಂಧಿ ವಿಷಯದ ಕುರಿತು ನ್ಯಾಯಾಲಯಕ್ಕೆ ನೆರವು ನೀಡುವ ಆಮಿಕಸ್ ಕ್ಯೂರಿ ನ್ಯಾಯವಾದಿ ಎ.ಡಿ.ಎನ್. ರಾವ್, ಈ ವಿಷಯವನ್ನು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದರು. ಇದೇ ರೀತಿ ಅರಣ್ಯ ಅಧಿಕಾರಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದಿದೆ ಎಂದು ರಾವ್ ಅವರು ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠಕ್ಕೆ ಶುಕ್ರವಾರ ತಿಳಿಸಿದರು.

‘‘ಅವರಿಗೆ (ಅರಣ್ಯ ಅಧಇಕಾರಿಗಳು) ರಕ್ಷಣೆ ನೀಡಬೇಕೇ ?’’ ಎಂದು ಪೀಠ ರಾವ್ ಅವರಲ್ಲಿ ಪ್ರಶ್ನಿಸಿತು. ಅನಿತಾ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರಾವ್ ಉಲ್ಲೇಖಿಸಿದರು. ಪೀಠ ಅನಿತಾ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News