ಸೋನಭದ್ರಾ ಗುಂಡಿನ ದಾಳಿ ಪ್ರಕರಣದ ಸಂತ್ರಸ್ತರಿಗೆ ಸರ್ವ ನೆರವು: ಆದಿತ್ಯನಾಥ್ ಭರವಸೆ

Update: 2019-07-21 14:03 GMT

ಲಕ್ನೊ, ಜು.21: ಕಳೆದ ಬುಧವಾರ ಉತ್ತರಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಹತ್ಯೆಯಾದ ರೈತರ ಮನೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಭೇಟಿ ನೀಡಿದ್ದು , ಸಂತ್ರಸ್ತರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಹೇಳಿದ್ದಾರೆ.

ಆದಿವಾಸಿಗಳಿಂದ ಜಮೀನು ಕಿತ್ತುಕೊಳ್ಳಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಪ್ರದೇಶದಲ್ಲಿ ಇಂತಹ ಘಟನೆ ಪುನರಾವರ್ತನೆಯಾಗದಿರಲು ಇಲ್ಲಿ ಒಂದು ಪೊಲೀಸ್ ಹೊರಠಾಣೆ ಆರಂಭಿಸಲಾಗುವುದು ಎಂದು ಆಶ್ವಾಸನೆ ನೀಡಿದ ಮುಖ್ಯಮಂತ್ರಿ, ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿಕೊಡುವಂತೆ ಸಂತ್ರಸ್ತರ ಕುಟುಂಬದವರಿಗೆ ಸಲಹೆ ನೀಡಿದರು. ಸೋನಭದ್ರಾ ಜಿಲ್ಲೆಯ ಉಬ್ಭಾ ಎಂಬ ಗ್ರಾಮದಲ್ಲಿ ಆದಿವಾಸಿ ರೈತರು ತಲೆತಲಾಂತರದಿಂದ ಕೃಷಿ ಮಾಡುತ್ತಿದ್ದ 36 ಎಕರೆ ಪ್ರದೇಶವನ್ನು ಗ್ರಾಮದ ಮುಖ್ಯಸ್ಥ ಯಾಗ್ಯ ದತ್ ಹಾಗೂ ಆತನ ಸಹಚರರು ಬಲವಂತವಾಗಿ ವಶಕ್ಕೆ ಪಡೆಯಲು ಮುಂದಾಗಿದ್ದರು. ಇದಕ್ಕೆ ಒಪ್ಪದಿದ್ದಾಗ ಗುಂಡು ಹಾರಿಸಿ 10 ರೈತರನ್ನು ಹತ್ಯೆ ಮಾಡಲಾಗಿದೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ಧನ ಮತ್ತು 10 ಬಿಘ (ನಾಲ್ಕು ಬಿಘ ಎಂದರೆ ಸುಮಾರು 1 ಎಕರೆ) ಜಮೀನು , ಗಾಯಗೊಂಡವರಿಗೆ 7 ಲಕ್ಷ ರೂ. ಪರಿಹಾರಧನ ಮತ್ತು 6 ಬಿಘ ಜಮೀನು ನೀಡಬೇಕು ಎಂದು ಸಂತ್ರಸ್ತರ ಕುಟುಂಬದವರು ಆಗ್ರಹಿಸಿದ್ದಾರೆ. ಗ್ರಾಮದ ಮುಖ್ಯಸ್ಥನಿಗೆ ಮರಣದಂಡನೆ ವಿಧಿಸಬೇಕು ಎಂದು ಘಟನೆಯಲ್ಲಿ ಗಾಯಗೊಂಡವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News