ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣ: ಅರ್ಚಕ ಸೇರಿ ಐವರ ಬಂಧನ

Update: 2019-07-21 15:47 GMT

ಬೆಂಗಳೂರು, ಜು.21: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯ ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣ ಸಂಬಂಧ ದೇವಾಲಯದ ಅರ್ಚಕ ಸೇರಿ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಡಪತ್ರಿಯ ಬುಗ್ಗ ರಾಮಲಿಂಗೇಶ್ವರ ದೇವಾಲಯದ ಅರ್ಚಕ ಟಿ.ಬಾಲನರಸಯ್ಯ(42), ವಾಹನ ಚಾಲಕ ಬಿ.ವಿಜಯಕುಮಾರ್, ಕೆ.ಕುಮ್ಮಟಕೇಶವ, ಡಿ.ಮನೋಹರ ಹಾಗೂ ಪೊಲ್ಲಾರಿ ಮುರಳಿ ಬಂಧಿತ ಆರೋಪಿಗಳಾಗಿದ್ದು, ಇದೇ ಪ್ರಕರಣದಲ್ಲಿ ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಕೊಪ್ಪಳ ಎಸ್ಪಿ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 2 ಹಾರೆ, ಮೂರು ಕಬ್ಬಿಣದ ಚಾಣ, ಸುತ್ತಿಗೆ, ಬುಟ್ಟಿ ಹಾಗೂ ಪಿಕಾಸಿ, ಕಾರು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

ನಿಧಿಗಳ್ಳರು: ಆರೋಪಿಗಳು, ನಿಧಿ ಹಾಗೂ ವಜ್ರಗಳ ಆಸೆಗಾಗಿ ವ್ಯಾಸರಾಜ ಗುರುಗಳ ಸಮಾಧಿ ಸ್ಮಾರಕವನ್ನು ಧ್ವಂಸ ಮಾಡಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಇದಕ್ಕಾಗಿಯೇ, ಕೃತ್ಯ ನಡೆಸುವ ಮುನ್ನ ಸ್ಥಳದಲ್ಲಿ ಬುಗ್ಗ ರಾಮಲಿಂಗೇಶ್ವರ ದೇವಾಲಯದ ಅರ್ಚಕ ಟಿ.ಬಾಲನರಸಯ್ಯ ನೇತೃತ್ವದಲ್ಲಿ ಪೂಜೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿರುವ ನವ ಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಜು.17ರ ರಾತ್ರಿ ಧ್ವಂಸಗೊಳಿಸಿದ್ದರು.

ಘಟನೆ ಬಳಿಕ ಗಂಗಾವತಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಮೊಕದ್ದಮೆ ದಾಖಲಿಸಿದ್ದರು. 5 ವಿಶೇಷ ತನಿಖಾ ತಂಡ ರಚಿಸಿ, ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವ ಬಳ್ಳಾರಿ ವಲಯ ಐಜಿಪಿ ನಂಜುಂಡಸ್ವಾಮಿ ಅವರು ತನಿಖಾಧಿಕಾರಿಗಳಿಗೆ ವಿಶೇಷ ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News