ಮೈತ್ರಿ ಶಾಸಕರ ಸಂಖ್ಯೆ ಎರಡಂಕಿಗೆ ಇಳಿಯಲಿದೆ: ಸದಾನಂದಗೌಡ

Update: 2019-07-21 16:30 GMT

ಬೆಂಗಳೂರು, ಜು.21: ಬಿಜೆಪಿ ಸದನದಲ್ಲಿ ಪ್ರಜಾತಂತ್ರಕ್ಕೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದೆ. ಮೈತ್ರಿ ಪಕ್ಷಗಳಿಗೆ ಬಹುಮತ ಇಲ್ಲ, ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿದು, ಎರಡಂಕಿಯಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸದನದಲ್ಲಿ ಬಹುಮತ ಇದೆ ಅಂತ ಜಗತ್ತಿಗೇ ಗೊತ್ತು. ಆದರೆ, ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಏನು ಬೇಕಾದರೂ ಮಾಡುತ್ತಾರೆ ಎಂದು ಟೀಕಿಸಿದರು.

ನಾಳೆ ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ಕೊಡುತ್ತದೆ. ಬಿಜೆಪಿ ನ್ಯಾಯ ಬದ್ಧವಾಗಿ ನಡೆದುಕೊಂಡಿದೆ. ಈ ಎರಡು ದಿನದಲ್ಲಿ ಆಡಳಿತ ಪಕ್ಷಗಳ ಶಾಸಕರ ಸಂಖ್ಯೆ ಇನ್ನಷ್ಟು ಕಮ್ಮಿ ಆಗಿದೆ. ರಾಜ್ಯದಲ್ಲಿ ಬರಗಾಲ, ರೈತರ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದರು.

ಆಡಳಿತ ಪಕ್ಷದವರು ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡದಿದ್ದರೆ ಬಿಜೆಪಿ ಮುಂದೆ ಹಲವು ಮಾರ್ಗಗಳಿವೆ. ಸಂವಿಧಾನಾತ್ಮಕವಾಗಿ ನಾವು ಹೋರಾಟ ಮಾಡುತ್ತೇವೆ. ರಾಜ್ಯಪಾಲರು, ರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್ ನಾವು ಕಡೆ ಗಮನ ಕೊಡುತ್ತೇವೆ ಎಂದು ಸದಾನಂದಗೌಡ ಹೇಳಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದರೂ ಕುದುರೆ ವ್ಯಾಪಾರ ನಿಲ್ಲುವುದಿಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮಾತ್ರ ಎಲ್ಲವೂ ಅಂತ್ಯಗೊಳ್ಳುತ್ತದೆ. ಮಧ್ಯಂತರ ಚುನಾಚಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News