ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು

Update: 2019-07-21 16:35 GMT

ಶಿವಮೊಗ್ಗ, ಜು. 20: ಮಲೆನಾಡಿನಲ್ಲಿ ಕ್ರಮೇಣ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದೆ. ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿಯೂ ಏರಿಕೆ ಕಂಡುಬರುತ್ತಿದೆ. 

ರವಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಘಟ್ಟ ಪ್ರದೇಶಗಳಾದ ಮಾಣಿಯಲ್ಲಿ 62 ಮಿಲಿ ಮೀಟರ್ (ಮಿ.ಮೀ.), ಯಡೂರು 89 ಮಿ.ಮೀ., ಹುಲಿಕಲ್ 109 ಮಿ.ಮೀ., ಮಾಸ್ತಿಕಟ್ಟೆ 98 ಮಿ.ಮೀ. ವರ್ಷಧಾರೆಯಾಗಿದೆ. 

ಶಿವಮೊಗ್ಗದಲ್ಲಿ 4 ಮಿ.ಮೀ., ಭದ್ರಾವತಿಯಲ್ಲಿ 1.6 ಮಿ.ಮೀ., ತೀರ್ಥಹಳ್ಳಿಯಲ್ಲಿ 23 ಮಿ.ಮೀ., ಸಾಗರದಲ್ಲಿ 23.4 ಮಿ.ಮೀ., ಸೊರಬದಲ್ಲಿ 7.1 ಮಿ.ಮೀ., ಶಿಕಾರಿಪುರದಲ್ಲಿ 1.3 ಮಿ.ಮೀ. ಹಾಗೂ ಹೊಸನಗರದಲ್ಲಿ 98.8 ಮಿ.ಮೀ. ಮಳೆಯಾಗಿದೆ. 

ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1766.60 (ಗರಿಷ್ಠ ಮಟ್ಟ : 1819) ಅಡಿಯಿದೆ. 9580 ಕ್ಯೂಸೆಕ್ ಒಳಹರಿವಿದ್ದು, 2815 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ವ್ಯಾಪ್ತಿಯಲ್ಲಿ 38.4 ಮಿ.ಮೀ. ಮಳೆಯಾಗಿದೆ. 

ಭದ್ರಾ ಡ್ಯಾಂ ನೀರಿನ ಮಟ್ಟ 137 (ಗರಿಷ್ಠ ಮಟ್ಟ: 186) ಅಡಿಯಿದೆ. 3936 ಕ್ಯೂಸೆಕ್ ಒಳಹರಿವಿದ್ದು,  209 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ವ್ಯಾಪ್ತಿಯಲ್ಲಿ 6.6 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News