ಕೊಡಗಿನಲ್ಲಿ ಸಾಧಾರಣ ಮಳೆ: ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ; ಅಲ್ಲಲ್ಲಿ ಗುಡ್ಡ ಕುಸಿತ

Update: 2019-07-21 16:53 GMT

ಮಡಿಕೇರಿ, ಜು.21: ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 

ನದಿ ನೀರು ರಸ್ತೆಯನ್ನು ಆವರಿಸಲು ಕೆಲವೇ ಅಡಿಗಳಷ್ಟೇ ಬಾಕಿ ಉಳಿದಿದ್ದು, ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಡಗು, ಕೇರಳ ಗಡಿಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪಕ್ಕದ ಭಾಗಮಂಡಲದ ನದಿಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಜಿಲ್ಲೆಯ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದೆಯಾದರೂ ನಿರಂತರ ಮಳೆ ಸುರಿಯುತ್ತಿರುವುದರಿಂದ ಕೆಲವು ಭಾಗಗಳಲ್ಲಿ ಗುಡ್ಡ ಕುಸಿದ ಘಟನೆಗಳು ನಡೆದಿದೆ. ವಿರಾಜಪೇಟೆ ತಾಲೂಕಿನ ಮಲೆತಿರಿಕೆ ಬೆಟ್ಟದಲ್ಲಿರುವ ಎರಡು ಮನೆಗಳ ತಡೆಗೋಡೆಗಳ ಮೇಲೆ ಗುಡ್ಡ ಕುಸಿದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯತ್ ಸದಸ್ಯ ಡಿ.ಪಿ.ರಾಜೇಶ್ ಪದ್ಮನಾಭ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಅಂದಾಜು 3 ಲಕ್ಷ ರೂ.ನಷ್ಟವಾಗಿದೆ ಎಂದು ಮನೆ ಮಾಲಕರು ತಿಳಿಸಿದ್ದಾರೆ.

ಕಳೆದ ವರ್ಷ ಮಹಾಮಳೆಗೆ ಭಾರೀ ಅನಾಹುತಗಳನ್ನು ಎದುರಿಸಿದ್ದ ಜೋಡುಪಾಲದಲ್ಲೂ ಗುಡ್ಡಗಳು ಕುಸಿದಿದ್ದು, ಎಲ್ಲಿಯೂ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಕಳೆದ ಮಳೆಗಾಲದಲ್ಲಿ ಹಾನಿಗೀಡಾಗಿದ್ದ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬೃಹತ್ ಗುಡ್ಡ ಕುಸಿಯುತ್ತಲೇ ಇದ್ದು, ಇಂದೂ ಕೂಡ ಮಣ್ಣು ಕುಸಿದು ಬಿದ್ದಿದೆ. 

ಜಿಲ್ಲೆಯ ಜಲಪಾತಗಳು ಸೊಬಗನ್ನು ಹೆಚ್ಚಿಸಿಕೊಂಡಿದ್ದು, ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 

ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಲ್ಲಿರುವ ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News