ಸಾಲಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ

Update: 2019-07-21 16:59 GMT

ಮಂಡ್ಯ, ಜು.21: ಮದ್ದೂರು ತಾಲೂಕಿನ ತೂಬಿನಕೆರೆ ಹಾಗೂ ರಾಜೇಗೌಡನದೊಡ್ಡಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೂಬಿನಕೆರೆ ಮೊಳ್ಳೇಗೌಡ ಅವರ ಪುತ್ರ ಕೃಷ್ಣೇಗೌಡ(55) ಹಾಗೂ ರಾಜೇಗೌಡನದೊಡ್ಡಿಯ ಬಸವರಾಜು(49) ಆತ್ಮಹತ್ಯೆ ಮಾಡಿಕೊಂಡ ರೈತರು.

ಕೃಷ್ಣೇಗೌಡರ ಕುಟುಂಬಕ್ಕೆ ಒಟ್ಟು 3.5 ಎಕರೆ ಜಮೀನಿದ್ದು, ಬೆಳೆ ಬೆಳೆಯಲು ಕೆಸ್ತೂರು ಕೃಷಿ ಸಹಕಾರ ಸಂಘದಿಂದ 2 ಲಕ್ಷ ರೂ., ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 1.5 ಲಕ್ಷ ರೂ. ಒಡವೆ ಸಾಲ, ಖಾಸಗಿ ಲೇವಾದೇವಿದಾರರಿಂದ 4 ಲಕ್ಷಕ್ಕೂ ಹೆಚ್ಚುಸಾಲ ಮಾಡಿದ್ದರು ಎನ್ನಲಾಗಿದೆ.

ನೀರಿಲ್ಲದೇ ನಿರಂತರ ಬೆಳೆನಷ್ಟ ಹಾಗೂ ಸಾಲಗಾರರ ಕಾಟದಿಂದ ಬೇಸತ್ತು ಜು.18 ಬೆಳಗ್ಗೆ ತಮ್ಮ ಜಮೀನು ಬಳಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಮೃತರಾದರು. 

ಮೃತರಿಗೆ ಪತ್ನಿ, ನಾಲ್ವರು ಪುತ್ರಿಯರು, ಪುತ್ರ ಇದ್ದಾರೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವರಾಜು ಅವರಿಗೆ 3 ಎಕರೆ ಜಮೀನಿದ್ದು, ಕೃಷಿ ಚಟುವಟಿಕೆಗೆ ವಿಜಯ ಬ್ಯಾಂಕ್‍ನಲ್ಲಿ 1 ಲಕ್ಷ ರೂ. ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1.50 ಲಕ್ಷ, ಸ್ವಸಹಾಯಸಂಘಗಳಲ್ಲಿ 1 ಲಕ್ಷ ರೂ. ಹಾಗೂ ಖಾಸಗಿ ವ್ಯಕ್ತಿಗಳಿಂದ 3 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.

ನೀರಿಲ್ಲದೆ ಬೆಳೆನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಸಾಲಕ್ಕೆ ಹೆದರಿ ಶುಕ್ರವಾರ ಸಂಜೆ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News