ಮೊಬೈಲ್ ಶೋರೂಂನಲ್ಲಿ ಕಳ್ಳತನ: 15 ಲಕ್ಷ ರೂ. ಮೌಲ್ಯದ ವಸ್ತು ದೋಚಿ ಪರಾರಿ

Update: 2019-07-21 17:07 GMT

ನಾಗಮಂಗಲ, ಜು.21: ಮೊಬೈಲ್ ಶೋರೂಂ ಒಂದರ ರೋಲಿಂಗ್ ಶಟರ್ ಕೊರೆದು ಲಕ್ಷಾಂತರ ರೂ. ಬೆಲೆಯ ವಿವಿಧ ಕಂಪನಿಯ ಮೊಬೈಲ್ ಸೆಟ್‍ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗವಿರುವ ಸಂಗೀತ ಮೊಬೈಲ್ ಶೋ ರೂಂನಲ್ಲಿ ಕಳ್ಳತನ ನಡೆದಿದ್ದು, ಸುಮಾರು 15 ಲಕ್ಷ ರೂ. ಮೌಲ್ಯದ ಮೊಬೈಲ್‍ಗಳನ್ನು  ದೋಚಿ ಪರಾರಿಯಾಗಿದ್ದಾರೆ.

ಕ್ಯಾಷ್ ಕೌಂಟರ್ ನಲ್ಲಿ ಇಡಲಾಗಿತ್ತು ಎನ್ನಲಾದ 47 ಸಾವಿರ ಹಣವನ್ನೂ ಕಳವು ಮಾಡಲಾಗಿದೆ. ಶೋ ರೂಂ ಪಕ್ಕದಲ್ಲಿದ್ದ ಬಿಲ್ಡಿಂಗ್ ಮಾಲಕರ ಕಚೇರಿಗೂ ಕಳ್ಳರು ನುಗ್ಗಿದ್ದು, ಆದರೆ ಏನನ್ನೂ ದೋಚದೆ ವಾಪಸ್ ಆಗಿದ್ದಾರೆ.

ಮೂವರು ಕಳ್ಳರ ತಂಡ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಒಳನುಗ್ಗಿರುವ ಮತ್ತು ಮೊಬೈಲ್ ದೋಚಿರುವ ದೃಶ್ಯಗಳು ಶೋ ರೂಂನ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಡಿವೈಎಸ್‍ಪಿ, ಸಿಪಿಐ, ಪಟ್ಟಣ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News