ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್: ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ನೇಮಕ

Update: 2019-07-21 17:56 GMT

ತುಮಕೂರು,ಜು.21: ತುಮಕೂರು ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ವಜಾ(ಸೂಪರ್ ಸೀಡ್)ಗೊಳಿಸಿ ತಮ್ಮನ್ನು ಒಂದು ವರ್ಷದ ಅವಧಿಗೆ ಬ್ಯಾಂಕಿನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಬೆಂಗಳೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರು ಜುಲೈ 19ರಂದು ಹೊರಡಿಸಿರುವ ಆದೇಶದನ್ವಯ ಜುಲೈ 20ರ ಸಂಜೆ ಆಡಳಿತಾಧಿಕಾರಿಯ ಸ್ವಯಂ ಪ್ರಭಾರವನ್ನು ವಹಿಸಿಕೊಂಡಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆಗಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಮುಂದಿನ ಕಾರ್ಯಚಟುವಟಿಕೆಗಳನ್ನು ರೂಪಿಸುವ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಸೂಪರ್ ಸೀಡ್ ಮಾಡಲು ಕಾರಣವೇನೆಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 6 ಪುಟಗಳನ್ನೊಳಗೊಂಡ ಜಂಟಿ ನಿಬಂಧಕರ ಆದೇಶದಲ್ಲಿ ಪ್ರತ್ಯೇಕವಾಗಿ ಕಾರಣವೇನೆಂದು ತಿಳಿಸಿಲ್ಲ. ಆದರೆ ಬ್ಯಾಂಕಿನ ಹಣಕಾಸು ವ್ಯವಹಾರದಲ್ಲಿ ಲೋಪವಾಗಿರುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ವಿಷಯದ ಬಗ್ಗೆ ವಿವರವಾದ ಮಾಹಿತಿ ನನಗೆ ಗೊತ್ತಿಲ್ಲ. ಜಂಟಿ ನಿಬಂಧಕರು ತನಿಖೆ ನಡೆಸಿದ್ದು, ಹಣಕಾಸು ವ್ಯವಹಾರದಲ್ಲಿ ಲೋಪವಾಗಿರುವದು ದೃಢಪಟ್ಟ ಹಿನ್ನೆಲೆಯಲ್ಲಿ ತಮ್ಮ ಅಧಿಕಾರ ಉಪಯೋಗಿಸಿಕೊಂಡು ಸಹಕಾರ ಸಂಘಗಳ ಕಾಯ್ದೆ ಕಲಂ 30ರನ್ವಯ ತಮ್ಮನ್ನು ನೇಮಕ ಮಾಡಿದ್ದಾರೆ. ಡಿಸಿಸಿ ಬ್ಯಾಂಕಿನ ಅವ್ಯವಹಾರದ ಬಗ್ಗೆ ಮುಂದಿನ ಹಂತದ ತನಿಖೆ ನಡೆಸಲು ತಮಗೆ ಅಥವಾ ಇನ್ನೂ ಮೇಲಿನ ಹಂತದ ಅಧಿಕಾರಿಗಳನ್ನು  ನಿಯೋಜಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಬ್ಯಾಂಕಿನ ಎಲ್ಲ ವಹಿವಾಟುಗಳು ಎಂದಿನಂತೆ ಸಾಮಾನ್ಯವಾಗಿ ನಡೆಯಲಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಸದ್ಯದ ಬ್ಯಾಂಕಿನ ನಡಾವಳಿ ಹಾಗೂ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ ನಂತರ ನಿಯಮಾನುಸಾರ ನಡಾವಳಿಗಳನ್ನು ಮುಂದುವರೆಸಿ ಕೊಂಡು ಹೋಗುತ್ತೇನೆ. ಮುಂದಿನ ವಾರದೊಳಗೆ ಬ್ಯಾಂಕಿನ ಹಿಂದಿನ ನಡಾವಳಿಗಳನ್ನು ಅವಲೋಕಿಸಿ ಮುಂದಿನ ನಡಾವಳಿಗಳನ್ನು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News