ನಿರ್ದೇಶಕ ತನ್ನ ಜಾಣ್ಮೆಯ ಮೂಲಕ ಜನರಿಗೆ ಹತ್ತಿರವಾಗಬೇಕು: ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್

Update: 2019-07-21 18:19 GMT

ಮೈಸೂರು,ಜು.21: ಒಂದು ಗುಂಪಿನಿಂದ ತೆರೆದ ಸ್ಥಿತಿಯಲ್ಲಿ ನಾಟಕ ಕೃತಿಯನ್ನು ಭಾಷೆಯೊಂದಿಗೆ ಅನುಸಂದಾನ ಮಾಡುವುದೇ ನಾಟಕವಾಗಿದ್ದು, ಇದರಲ್ಲಿ ನಿರ್ದೇಶಕನಾದವರು ತನ್ನ ಜಾಣ್ಮೆ ತೋರಿಸುವ ಮೂಲಕ ಜನರಿಗೆ ಹತ್ತಿರವಾಗಿ ತನ್ನ ವಿಚಾರಗಳನ್ನು ಮುಟ್ಟಿಸಬೇಕು ಎಂದು ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಅಭಿಪ್ರಾಯಟ್ಟರು.

ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ರವಿವಾರ ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯವರು ಏರ್ಪಡಿಸಿದ್ದ ರಂಗ ನಿರ್ದೇಶಕ ಕೃಷ್ಣ ಜನಮನ ಬರೆದಿರುವ ಯಾತ್ರೆ ಮತ್ತು ರಂಗಕಾಯಕ ಪುಸ್ತಕ ಬಿಡುಗಡೆ ಹಾಗೂ ವೃತ್ತಿ, ಹವ್ಯಾಸಿ, ರೆಪರ್ಟರಿ ರಂಗಕಲಾವಿದರ ಸಾಮಾಜಿಕ ಹೊಣೆಗಾರಿಕೆ ಕುರಿತು ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಟಕಗಳು ಸಾರ್ವಜನಿಕವಾದುದು ಮತ್ತು ಸಾಮೂಹಿಕವಾದುದು. ಒಂದು ಗುಂಪಿನಿಂದ ತೆರೆದ ಸ್ಥಿತಿಯಲ್ಲಿ ನಾಟಕ ಕೃತಿಯನ್ನು ಭಾಷೆಯೊಂದಿಗೆ ಅನುಸಂದಾನ ಮಾಡುವುದೇ ನಾಟಕವಾಗಿದ್ದು, ಇದರಲ್ಲಿ ನಿರ್ದೇಶಕನಾದವರು ತನ್ನ ಜಾಣ್ಮೆ ತೋರಿಸುವ ಮೂಲಕ ಜನರಿಗೆ ಹತ್ತಿರವಾಗಿ ತನ್ನ ವಿಚಾರಗಳನ್ನು ಮುಟ್ಟಿಸಬೇಕು ಎಂದರು.

ನಿರ್ದೇಶಕನಿಗೆ ನಟನ ಮಾನಸಿಕ ಸ್ಥಿತಿಯ ಅರಿವು ಇರಬೇಕು. ಎಲ್ಲ ಸೃಷ್ಟಿಗಳನ್ನು ಬಳಸಿಕೊಂಡು ಅನುಸೃಷ್ಟಿಸುವುದೇ ನಿರ್ದೇಶಕನ ಕೆಲಸವಾಗಿದ್ದು, ಇದರ ಅರಿವು ಇಲ್ಲದವ ನಿರ್ದೇಶಕನಾಗಲಾರ ಎಂದರು.

ನಟ-ನಟಿಯರಿಗೆ ಇರಬೇಕಾದ ಅರ್ಹತೆ ಕುರಿತು ರಂಗಭೂಮಿ ಕಲಾವಿದ ಹುಲುಗಪ್ಪ ಕಟ್ಟೀಮನಿ ಅವರು ಮಾತನಾಡಿ, ನಟನಿಗೆ ನಿರ್ಧಿಷ್ಟವಾದ ಅರ್ಹತೆ ಎಂಬುದಿಲ್ಲ. ನಟ ತನ್ನ ಬದುಕಿನ ಅನುಭವಗಳ ಮೂಲಕ ಕಲಿತದ್ದೇ ನಟನೆಯಾಗಬಹುದು. ಅಥವಾ ಬೇರೆಯರಿಂದ ಎರವಲು ಪಡೆದು ತನ್ನದೇ ಎಂಬಂತೆ ಧಾರೆ ಎರೆಯುವುದೇ ನಟನೆ ಎನ್ನಬಹುದು ಎಂದರು. ಒಬ್ಬ ನಟನಿಗೆ ಯಾವುದೇ ಇಸಂ, ಅಥವಾ ಪೂರ್ವಾಗ್ರಹ ಇರಬಾರದು. ಆತನ ಮನಸ್ಸು ಸಂಪೂರ್ಣ ಖಾಲಿ ಇರಬೇಕು ಆಗ ಮಾತ್ರ ಏನಾದರೂ ತುಂಬಲು ಸಾಧ್ಯ. ನಟನೆ ಎಂಬುದೇ ಒಂದು ಸುಳ್ಳು. ಸುಳ್ಳನ್ನು ಸತ್ಯಮಾಡಿ ತೋರಿಸಿ, ಪ್ರೇಕ್ಷರನ್ನು ನಂಬಿಸುವುದು ನಟನೆ ಎಂದು ವಿವರಿಸಿದರು.

ವಿಚಾರವಾದಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಹಿರಿಯ ರಂಗಕರ್ಮಿ ಡಾ.ಎಚ್.ಕೆ.ರಾಮನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ರಂಗಕರ್ಮಿಗಳಾದ ರೂಬಿನ್ ಸಂಜಯ್, ಮೈಮ್ ರಮೇಶ್, ಪ್ರಭುಸ್ವಾಮಿ ಮಳೀಮಠ್, ಕೀರ್ತಿರಾಜ್, ಹರಿ ಪ್ರಸಾದ್, ಸುಜಾತ ಅಕ್ಕಿ, ಜಯಶ್ರೀ ಹೆಗ್ಡೆ, ಉದಯ್ ಕುಮಾರ್, ಧನಂಜಯ್ಯ, ಬಿ.ಎಸ್.ದಿನಮಣಿ, ಚಿದಾನಂದ ಸೊರಬ ವಿಚಾರ ಸಂಕಿರಣದಲ್ಲಿ ಮಂಡನೆಯಾದ ವಿಷಯಗಳಿಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News