ಓ ಮೆಣಸೇ…

Update: 2019-07-21 18:30 GMT

ಆಯಾ ಭಾಗದ ಸಂಪನ್ಮೂಲಗಳು ಆಯಾ ಭಾಗದಲ್ಲೇ ಸದ್ಬಳಕೆಯಾಗಬೇಕು
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಗ್ರಹಸ್ಥಾಶ್ರಮದಲ್ಲಿ ಬಳಕೆಯಾಗಬೇಕಾದ ಸಂಪನ್ಮೂಲಗಳು, ಸನ್ಯಾಸಾಶ್ರಮದಲ್ಲಿ ಬಳಕೆಯಾದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ.

---------------------

ಎಚ್.ಡಿ. ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯರಿಗೆ ದೇವೇಗೌಡರೇ ದುಶ್ಮನ್
- ಶ್ರೀನಿವಾಸ ಪ್ರಸಾದ್, ಸಂಸದ

ಆದರೆ ಅವರಿಬ್ಬರ ಮೇಲಿನ ದ್ವೇಷಕ್ಕೆ ಸಕಲ ದಲಿತರ ದುಶ್ಮನ್ ಕಟ್ಟಿಕೊಂಡದ್ದು ನಿಮ್ಮ ಅತಿ ದೊಡ್ಡ ತಪ್ಪು.

---------------------

ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು - ಡಿ.ಕೆ.ಶಿವಕುಮಾರ್, ಸಚಿವ
ಕೆಲವೊಮ್ಮೆ ಡೈರಿಯಲ್ಲಿ ಬರೆದು ಸಿಕ್ಕಿ ಹಾಕಿಕೊಳ್ಳುತ್ತಾರೆ.

---------------------

ಚಿಕನ್ ಮತ್ತು ಮೊಟ್ಟೆಯನ್ನು ಸಸ್ಯಾಹಾರ ಎಂದು ಘೋಷಿಸಬೇಕು - ಸಂಜಯ್‌ರಾವತ್, ಶಿವಸೇನೆ ಸಂಸದ
ನೀರುಳ್ಳಿ, ಬೆಳ್ಳುಳ್ಳಿಯನ್ನು ಮಾಂಸಾಹಾರವೆಂದು ಘೋಷಿಸಲು ಇಸ್ಕಾನ್ ಚಳವಳಿ ನಡೆಸುತ್ತಿದೆ.

---------------------

ದೇಶದ ಮೂಲೆ ಮೂಲೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಿಯೇ ತೀರುತ್ತೇವೆ - ಅಮಿತ್ ಶಾ, ಕೇಂದ್ರ ಸಚಿವ
ಅಕ್ರಮವಾಗಿ ನೆಲೆಸಿರುವ ಆರ್ಯರನ್ನು ಮೊದಲು ಮಧ್ಯ ಏಶ್ಯಾಕ್ಕೆ ರವಾನಿಸಿ.

---------------------

ಒಳ್ಳೆಯ ರಸ್ತೆ ಬೇಕಿದ್ದರೆ ಟೋಲ್ ಹಣ ಕಟ್ಟಲೇ ಬೇಕು - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಆದರೆ ಸಮಸ್ಯೆ , ಕೆಟ್ಟ ರಸ್ತೆಗೆ ಟೋಲ್ ಕಟ್ಟಬೇಕಾಗಿರುವುದು.

---------------------

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಶಾಶ್ವತವಲ್ಲ - ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ
ಮಹಾತ್ಮಾಗಾಂಧಿಗೆ ಒದಗಿದ ಗತಿಯೇ ಅದಕ್ಕೂ ಒದಗುತ್ತದೆ ಎಂದಾಯಿತು.

---------------------
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕಾಂಗ್ರೆಸ್ ಬಿಡಬಾರದಿತ್ತು - ಶ್ರೀನಿವಾಸ ಪ್ರಸಾದ್, ಸಂಸದ
ನೀವು ಅಂಬೇಡ್ಕರ್‌ರನ್ನು ಬಿಡಬಾರದಿತ್ತು.

---------------------

ಬಿಜೆಪಿಯವರು ಮಂಗನ ಟೋಪಿ ಹಾಕುವುದರಲ್ಲಿ ನಿಸ್ಸೀಮರು - ಡಿ.ಕೆ. ಶಿವಕುಮಾರ್, ಸಚಿವ

ಮುಖ್ಯಮಂತ್ರಿ ಹುದ್ದೆಯನ್ನು ಕುಟುಂಬಕ್ಕೆ ಕೊಡುವುದಾದರೆ ನಾವೇ ಹಾಕಿಸಿಕೊಳ್ಳುವುದಕ್ಕೆ ಸಿದ್ಧ ಎಂದರಂತೆ ದೇವೇಗೌಡ.

---------------------

ನಾನು ಯಾವತ್ತೂ ಪಂಚತಾರಾ ಹೊಟೇಲ್‌ನಲ್ಲಿ ಮಲಗಿಲ್ಲ - ಎಚ್.ಡಿ.ರೇವಣ್ಣ , ಸಚಿವ
ನೀವು ಯಾವ ಹೊಟೇಲಲ್ಲಿ, ಯಾರ ಜೊತೆ ಮಲಗಿದ್ದೀರಿ ಎನ್ನುವುದನ್ನು ಹೇಳುವ ಅವಶ್ಯಕತೆ ಪ್ರಜಾಸತ್ತೆಗೆ ಇಲ್ಲ.

---------------------

ಸರಕಾರಿ ಹುದ್ದೆಯ ಆಸೆಗೆ ಬಿದ್ದರೆ ಭವಿಷ್ಯವೇ ಹಾಳಾಗಲಿದೆ - ಪಿ. ವಿಶ್ವನಾಥ ಶೆಟ್ಟಿ, ಲೋಕಾಯುಕ್ತ
ಸರಕಾರವೇ ಹಾಳು ಬಿದ್ದಿರುವಾಗ ಸರಕಾರಿ ಹುದ್ದೆಯನ್ನು ನಂಬುವುದಾದರೂ ಹೇಗೆ?

---------------------

ನಾನು ರಾಜಕೀಯದಲ್ಲಿ ಇರಬೇಕು ಎಂದು ನೆಲ್ಸನ್ ಮಂಡೇಲಾ ಹೇಳಿದ್ದರು - ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರ.ಕಾರ್ಯದರ್ಶಿ
ಆಫ್ರಿಕಾಕ್ಕೆ ತೆರಳಿ ರಾಜಕೀಯ ಮಾಡುವ ಉದ್ದೇಶ ಇದೆಯೇ?

---------------------

ಜನಧನ್ ಯೋಜನೆ ಜಾರಿಗೆ ಬಂದ ನಂತರ ಬಡವರು ಬ್ಯಾಂಕ್ ಸೇವೆ ಪಡೆಯುವಂತಾಯಿತು - ನರೇಂದ್ರ ಮೋದಿ, ಪ್ರಧಾನಿ

 ಅಕೌಂಟ್ ಇದ್ದರೆ ಆಯಿತೆ, ತುಂಬಲು ಹಣ ಬೇಡವೇ?

---------------------

ಭಾರತವು ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಮೊಬೈಲ್ ಮತ್ತು ಡೇಟಾ ದರಗಳನ್ನು ಹೊಂದಿದೆ - ರವಿ ಶಂಕರ್ ಪ್ರಸಾದ್, ಕೇಂದ್ರ ಸಚಿವ
ಆದರೆ ತಿನ್ನುವ ವಸ್ತುಗಳು ಮಾತ್ರ ದುಬಾರಿಯಾಗಿವೆ.

---------------------

ನಾನು ಕುರ್ಚಿಗೆ ಅಂಟಿಕೊಂಡು ಕುಳಿತು ಕೊಳ್ಳುವವನಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ
ಸದ್ಯಕ್ಕೆ ಮಂಚಕ್ಕೆ ಅಂಟಿ ಮಲಗುವುದೇ ಗತಿ.

---------------------
ವ್ಯಾಸರಾಯರ ವೃಂದಾವನವನ್ನು ಧ್ವಂಸ ಮಾಡಿರುವುದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ದಲಿತರ ಮನೆಗಳನ್ನು ಧ್ವಂಸ ಮಾಡಿದಾಗಲೂ ಇದೇ ಧ್ವನಿಯಲ್ಲಿ ಯಾಕೆ ಪ್ರತಿಭಟಿಸುವುದಿಲ್ಲ?

---------------------

ವಿಐಪಿ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವ ಒಟ್ಟಿಗೆ ಇರಲು ಸಾಧ್ಯವಿಲ್ಲ - ಜಯಪ್ರಕಾಶ್ ನಾರಾಯಣ, ಲೋಕ ಸತ್ತಾ ಪಕ್ಷದ ಸಂಸ್ಥಾಪಕ
ಅಂದರೆ ನಿಮಗೆ ವಿಐಪಿ ಸಂಸ್ಕೃತಿ ಮಾತ್ರ ಸಾಕೆಂದು ಅರ್ಥವೇ?

---------------------

ನನಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ನಾನು ಮಾಡಿಯೇ ಮಾಡುತ್ತೇನೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅಮೆರಿಕಕ್ಕೆ ಸರಿ ಎನಿಸದಿದ್ದರೂ ಪರವಾಗಿಲ್ಲ.

---------------------

ಬಿಜೆಪಿ ಸದಸ್ಯರೊಂದಿಗೆ ರಾಜಕೀಯಕ್ಕೆ ಮೀರಿದ ಸ್ನೇಹವಿದೆ - ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ಆದರೆ ಬಿಜೆಪಿಯ ಲಿಂಬಾವಳಿಯಂಥವರಿಂದ ತುಸು ದೂರವಿರಿ.

---------------------
ನನ್ನ ಸಾಲಕ್ಕಾಗಿ ನನ್ನನ್ನು ನಾನು ಅಡಮಾನ ಇಟ್ಟು ಕೊಳ್ಳುವವನಲ್ಲ - ಎಚ್. ವಿಶ್ವನಾಥ್, ಶಾಸಕ
ಅದಕ್ಕಾಗಿ ಸರಕಾರವನ್ನೇ ಅಡಮಾನ ಇಟ್ಟು ಬಿಟ್ಟಿರಿ.

---------------------

ಮೂರೂ ಪಕ್ಷಗಳು(ಕಾಂಗ್ರೆಸ್,ಬಿಜೆಪಿ,ಜೆಡಿಎಸ್) ಸೇರಿ ವಿಪಕ್ಷವಿಲ್ಲದೆ ರಾಜ್ಯದಲ್ಲಿ ಸರಕಾರ ರಚಿಸುವುದು ಉತ್ತಮ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಮೂರು ಬಿಟ್ಟವರು ಎಂಬ ಮಾತು ಆಗ ಅರ್ಥಪೂರ್ಣವಾಗುತ್ತದೆ.

---------------------
ಜನಪ್ರತಿನಿಧಿಗಳಾದ ನಾವು ಅಧಿಕಾರದಲ್ಲಿದ್ದರೂ ಕೆಲಸ ಮಾಡಬೇಕು, ಇಲ್ಲದಿದ್ದರೂ ಕೆಲಸ ಮಾಡಬೇಕು - ಯು.ಟಿ. ಖಾದರ್, ಸಚಿವ
ಆದರೆ ಯಾರ ಕೆಲಸ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಿಲ್ಲ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...