ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಕೃಷಿಕ ಸಮಾಜ ಕಟ್ಟಡ ನಿರ್ಮಾಣಕ್ಕೆ ಸಹಕಾರ: ಸಚಿವ ಶಿವಶಂಕರ್‌ರೆಡ್ಡಿ
ಬೆಂಗಳೂರು, ಜು.22: ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು.
ಸೋಮವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಕೃಷಿ ಭವನದ ಆವರಣದಲ್ಲಿ ಕೃಷಿಕ ಸಮಾಜ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದಲೂ ಕೃಷಿಕ ಸಮಾಜ ಕಟ್ಟಡ ನಿರ್ಮಾಣ ಮಾಡಬೇಕೆಂದು ಉದ್ದೇಶಿಸಲಾಗಿತ್ತು. ಅದು ಈಗ ನೆರವೇರಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ನಿವೇಶನಕ್ಕೆ ಸಂಬಂಧಿಸಿದಂತೆ ಹಾಪ್ ಕಾಮ್ಸ್ ಹಾಗೂ ಕೃಷಿಕ ಸಮಾಜದ ನಡುವೆ ಇದ್ದ ಭಿನ್ನಾಭಿಪ್ರಾಯದಿಂದ ಕಟ್ಟಡ ನಿರ್ಮಾಣ ವಿಳಂಬವಾಗಿದೆ. ಇದೀಗ ಈ ಭಿನ್ನಾಭಿಪ್ರಾಯವನ್ನು ಬಗೆಹರಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೃಷಿ ಸಮಾಜ ಕಟ್ಟಡದಲ್ಲಿ ಕೃಷಿಕರಿಗೆ ಸಂಬಂಧಿಸಿದ ಮಾಹಿತಿ ಕಾರ್ಯಾಗಾರ ಹಾಗೂ ಇನ್ನಿತರ ಕೃಷಿ ಸಂಬಂಧಿ ಮಾಹಿತಿಗಳ ಕಾರ್ಯಕ್ರಮ ಆಯೋಜಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು, ಈ ಮೂಲಕ ಮೈತ್ರಿ ಸರಕಾರ ಕೃಷಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಗೃಹ ಮಂಡಳಿ ಅಭಿಯಂತರರು ಇತರರ ಉಪಸ್ಥಿತರಿದ್ದರು.