ಪ್ರಾಂಶುಪಾಲರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ
Update: 2019-07-22 19:06 IST
ಬೆಂಗಳೂರು, ಜು.22: ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಜು.27ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಅಷ್ಟೇ ಮಾನ್ಯ ಮಾಡಲಾಗುತ್ತದೆ. ಶೇ.5 ರಷ್ಟು ಕೋರಿಕೆ ಹಾಗೂ ಕಡ್ಡಾಯ ವರ್ಗಾವಣೆ ಮಾಡಲಾಗುತ್ತಿದೆ. ದೂರು, ಪ್ರಕರಣಗಳ ವರ್ಗಾವಣೆಗೆ ಯಾವುದೇ ಮಿತಿ ನಿಗದಿಪಡಿಸಿಲ್ಲ. ಕನಿಷ್ಠ ಮೂರು ವರ್ಷ ಒಂದೇ ವಲಯದಲ್ಲಿ ಕಾರ್ಯನಿರ್ವಹಿಸಿರುವ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಲಾಗುತ್ತದೆ.
ಕೋರಿಕೆ ಅಥವಾ ಆದ್ಯತೆ ಅಡಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದವರು ಪರಸ್ಪರ ವರ್ಗಾವಣೆಗಾಗಿ ಅರ್ಜಿ ಸಲ್ಲಿಸುವಂತಿಲ್ಲ. ಅಮಾನತುಗೊಂಡ ಬಳಿಕ ಶಿಸ್ತುಕ್ರಮ ಬಾಕಿ ಇರಿಸಿ ಅಮಾನತು ತೆರವುಗೊಳಿಸಿರುವ ಪ್ರಾಂಶುಪಾಲರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಕೌನ್ಸೆಲಿಂಗ್ ಸಮಯದಲ್ಲಿ ಆದ್ಯತೆ ಬದಲಾಯಿಸಲು ಅವಕಾಶವಿಲ್ಲ ಎಂದು ಪ್ರಕಟನೆ ತಿಳಿಸಿದೆ.