×
Ad

ಕೊಡಗಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಮಳೆ: ಮಡಿಕೇರಿಯಲ್ಲಿ ಮೈಕೊರೆಯುವ ಚಳಿ

Update: 2019-07-22 23:26 IST

ಮಡಿಕೇರಿ, ಜು.22: ಕೊಡಗು ಜಿಲ್ಲೆಯಾದ್ಯಂತ ಪುಷ್ಯ ಮಳೆಯ ಪ್ರಮಾಣ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಜಿಲ್ಲೆಯ ಮೂರೂ ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಭಾನುವಾರದಷ್ಟೇ ಇದ್ದು, ರಸ್ತೆಯನ್ನು ಆವರಿಸಲು ಕೆಲವು ಅಡಿಗಳಷ್ಟೇ ಬಾಕಿ ಇದೆ. ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕಿನಾದ್ಯಂತ ಮಳೆಯ ವಾತಾವರಣ ಮುಂದುವರೆದಿದೆಯಾದರು ನದಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ತಲುಪಿಲ್ಲ. ಮಡಿಕೇರಿ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನಗರದಲ್ಲಿ ಇಂದು ಸಂಜೆ ಸುರಿದ ಮಳೆಗೆ ಚರಂಡಿಗಳು ತುಂಬಿ ಮುಖ್ಯ ರಸ್ತೆಗಳಲ್ಲಿ ನೀರು ಹರಿಯಿತು. ಅಲ್ಲಲ್ಲಿ ಲಘು ಪ್ರಮಾಣದಲ್ಲಿ ಬರೆಗಳು ಕುಸಿಯುತ್ತಲೇ ಇವೆ. 

ಸೋಮವಾರಪೇಟೆಯ ಹರದೂರು ಗ್ರಾ.ಪಂ ವ್ಯಾಪ್ತಿಯ ಹೊಸತೋಟ ಗ್ರಾಮದ ಮುಜೀಬ್ ಎಂಬುವವ ಮನೆಯ ಗೋಡೆ ಮಳೆಗೆ ಕುಸಿದಿದ್ದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ನಾಗೇಶ್ ರಾವ್ ಹಾಗೂ ಗ್ರಾ.ಪಂ ಸದಸ್ಯ ಗೌತಮ್ ಶಿವಪ್ಪ, ಸಲೀಂ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. 

ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿ, ತೊರೆ, ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಡಿಕೇರಿ ನಗರದಲ್ಲಿ ಮಳೆಯೊಂದಿಗೆ ಮಂಜು ಮತ್ತು ಚಳಿಯೂ ಇದೆ. ಕೇರಳದ ಗಡಿ ಭಾಗದ ಗ್ರಾಮಗಳಲ್ಲಿ ಅತಿ ಮಳೆಯಾಗುತ್ತಿರುವುದರಿಂದ ಪಕ್ಕದ ಕೊಡಗಿನ ಗಡಿ ಕುಟ್ಟ ಮತ್ತು ಕರಿಕೆ ವ್ಯಾಪ್ತಿಯಲ್ಲಿ ಮಳೆ ಪರಿಣಾಮ ಬೀರಿದೆ. 

ಮಳೆ ವಿವರ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 33.49 ಮಿ.ಮೀ. ಕಳೆದ ವರ್ಷ ಇದೇ ದಿನ 42.37 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 822.70 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2390.03 ಮಿ.ಮೀ ಮಳೆಯಾಗಿತ್ತು.

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2827.56 ಅಡಿಗಳು, ಕಳೆದ ವರ್ಷ ಇದೇ ದಿನ 2857.41 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 4.20 ಮಿ.ಮೀ., ಕಳೆದ ವರ್ಷ ಇದೇ ದಿನ 18.20 ಮಿ.ಮೀ. ಇಂದಿನ ನೀರಿನ ಒಳಹರಿವು 1748 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 11067 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನದಿಗೆ 8600, ನಾಲೆಗೆ 868 ಕ್ಯುಸೆಕ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News