ನಾಳೆ ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸಿ: ಸ್ಪೀಕರ್ ರಮೇಶ್ ಕುಮಾರ್ ಡೆಡ್ ಲೈನ್

Update: 2019-07-22 18:32 GMT

ಬೆಂಗಳೂರು, ಜು.22: ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮಂಗಳವಾರ ಸಂಜೆ 5 ರಿಂದ 6 ಗಂಟೆಯೊಳಗೆ ಮುಕ್ತಾಯಗೊಳಿಸುವುದಾಗಿ ಗಡುವು ನೀಡಿ, ಸದನವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮುಂದೂಡಿದರು. ಈ ಮೂಲಕ ಹಲವು ದಿನಗಳಿಂದ ಮುಂದೂಡಿಕೊಂಡು ಬರುತ್ತಿದ್ದ ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಅಂತಿಮ ಡೆಡ್ ಲೈನ್ ನೀಡಿದರು.

ಸೋಮವಾರ ರಾತ್ರಿ 11.45ರವರೆಗೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಈ ವೇಳೆ ಆಡಳಿತ ಪಕ್ಷದ ಕಡೆಯಿಂದ ಯಾರು ಯಾರು ಎಷ್ಟು ಹೊತ್ತು ಮಾತನಾಡುತ್ತಾರೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿಸಿ ಎಂದು ಸ್ಪೀಕರ್ ಕೇಳಿದರು.

ಈ ವೇಳೆ ಎದ್ದು ನಿಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ನಮ್ಮ ಪಕ್ಷದ ವತಿಯಿಂದ ಎಚ್.ಕೆ.ಪಾಟೀಲ್, ಯು.ಟಿ.ಖಾದರ್, ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ವತಿಯಿಂದ ಎಚ್.ಡಿ.ರೇವಣ್ಣ ಮಾತನಾಡಬೇಕಿದೆ. ನಾಳೆ ರಾತ್ರಿ 8 ಗಂಟೆಯೊಳಗೆ ಮುಖ್ಯಮಂತ್ರಿ ಉತ್ತರ ಕೊಟ್ಟು, ಮತಕ್ಕೆ ಹಾಕಿ ಎಲ್ಲ ಪ್ರಕ್ರಿಯೆ ಮುಗಿಸೋಣ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನನಗೆ ಇವತ್ತು ಕೊಟ್ಟ ಮಾತನ್ನು ತಪ್ಪಿಸಿಕೊಂಡಿದ್ದನ್ನು ಸಹಿಸಲು ಆಗುತ್ತಿಲ್ಲ. ನೀವು ಯಾರು ಯಾರು ಎಷ್ಟು ಹೊತ್ತಾದರೂ ಮಾತನಾಡಿ, ಬೆಳಗ್ಗೆ 10 ಗಂಟೆಗೆ ಸೇರಿ ಸಂಜೆ 4 ಗಂಟೆ ಬಳಿಕ ಒಂದು ನಿಮಿಷವು ನಾನು ಇಲ್ಲಿ ಇರಲು ಸಾಧ್ಯವಿಲ್ಲ. ಆದುದರಿಂದ, 4 ಗಂಟೆಯೊಳಗೆ ಎಲ್ಲವು ಮುಕ್ತಾಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ಮತ್ತೆ ಎದ್ದು ನಿಂತ ಸಿದ್ದರಾಮಯ್ಯ, ನಾಳೆ ಸಂಜೆ 4 ಗಂಟೆಯೊಳಗೆ ಚರ್ಚೆ ಮುಗಿಸೋಣ. ಆನಂತರ ಮುಖ್ಯಮಂತ್ರಿ ಒಂದು ಗಂಟೆ ಉತ್ತರ ಕೊಡಲಿ, ಆರು ಗಂಟೆಯೊಳಗೆ ಮತದಾನ ಪ್ರಕ್ರಿಯೆ ಮುಗಿಸೋಣ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಈ ಫಿಕ್ಸಿಂಗ್‌ಗೆ ನಾವು ರಾಜೀ ಆಗುವುದಿಲ್ಲ. ನಾಳೆಯ ವಿಚಾರ ಬೇಡ, ನಾವು ಶಾಸಕರಿದ್ದೇವೆ. ಇಲ್ಲಿ ಕೂಲಿ ಮಾಡಲು ಬಂದಿಲ್ಲ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಇಂದೇ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು. ನಿಮ್ಮ ನಿಮ್ಮ ಅಭಿಪ್ರಾಯಗಳಿಗೆ ನೀವು ಅಂಟಿಕೊಂಡು ಕೂಳಿತು ಬಿಟ್ಟರೆ ನಾನು ಏನು ಮಾಡಲು ಸಾಧ್ಯವಿಲ್ಲ. ನಾಳೆ ಸಂಜೆ 6 ಗಂಟೆಯೊಳಗೆ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದ ಸ್ಪೀಕರ್, ಸದನವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News