ಸರಗಳ್ಳತನ ಆರೋಪಿ ಬಂಧನ: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2019-07-23 13:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.23: ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಿರುವ ಈಶಾನ್ಯ ವಿಭಾಗದ ಪೊಲೀಸರು, 10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

 ಗೌರಿಬಿದನೂರಿನ ಮಾಧವನಗರದ ಸಾದಿಕ್(31) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರಿಬಿದನೂರಿನ ಮಾಧವನಗರದ ನ್ಯಾಷನಲ್ ಕಾಲೇಜು ಬಳಿ ನಿರ್ಮಿಸುತ್ತಿದ್ದ ಮನೆಗೆ ಹಣ ಹೊಂದಿಸಲು ಗಾರ್ಮೆಂಟ್ಸ್‌ನಲ್ಲಿನ ಕೆಲಸದಿಂದ ಬರುತ್ತಿದ್ದ ವೇತನ ಆರೋಪಿಗೆ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಗಾರ್ಮೆಂಟ್ಸ್ ಕೆಲಸ ಬಿಟ್ಟು ಸರಗಳ್ಳತನ ಕೃತ್ಯಕ್ಕಿಳಿದಿದ್ದ. ವರ್ಷದ ಹಿಂದೆ ಖರೀದಿಸಿದ್ದ ಬೈಕ್‌ನಲ್ಲಿ ಗೌರಿಬಿದನೂರಿನಿಂದ ನಗರಕ್ಕೆ ಬರುತ್ತಿದ್ದ ಆರೋಪಿಯು ಯಲಹಂಕ, ಸಂಪಿಗೆಹಳ್ಳಿ, ಯಲಹಂಕ ಉಪನಗರ, ವಿದ್ಯಾರಣ್ಯಪುರ, ದೊಡ್ಡಬಳ್ಳಾಪುರ ಗ್ರಾಮಾಂತರ ಪ್ರದೇಶಗಳಲ್ಲಿ ಸುತ್ತಾಡುತ್ತ ಒಂಟಿ ಮಹಿಳೆಯರನ್ನು ಗುರುತಿಸಿ, ಸರಗಳವು ಮಾಡಿ ಗೌರಿಬಿದನೂರಿಗೆ ಪರಾರಿಯಾಗುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕಳವು ಮಾಡಿದ ಚಿನ್ನದ ಸರಗಳನ್ನು ಮನೆ ಕಟ್ಟಿಸಲು ಮಾರಾಟ ಮಾಡುವುದಾಗಿ ಗಿರವಿ ಅಂಗಡಿ ಮಾಲಕರನ್ನು ನಂಬಿಸಿ ಮಾರಾಟ ಮಾಡುತ್ತಿದ್ದ. ಪತ್ನಿಗೆ ಗೊತ್ತಿಲ್ಲದಂತೆ ಆಕೆಯಿಂದಲೂ ಸರ ಮಾರಾಟ ಮಾಡಿಸುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ಆರೋಪಿಯ ಬಂಧನದಿಂದ ಯಲಹಂಕ ಉಪನಗರದ 3, ಸಂಪಿಗೆಹಳ್ಳಿ, ದೇವನಹಳ್ಳಿ, ವಿದ್ಯಾರಣ್ಯಪುರ, ಯಲಹಂಕ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ತಲಾ 1 ಸೇರಿದಂತೆ 8 ಸರಗಳವು ಕೃತ್ಯಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News