ಅತೃಪ್ತರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ

Update: 2019-07-23 16:43 GMT

ಬೆಂಗಳೂರು, ಜು.23: ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈನಲ್ಲಿ ಹೋಗಿ ಕುಳಿತಿರುವ ನಮ್ಮ ಪಕ್ಷದ ಶಾಸಕರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೆ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಅವರು ಉತ್ತರ ನೀಡುತ್ತಿದ್ದ ವೇಳೆ, ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಈಗ ಹೊರಗೆ ಹೋಗಿರುವ ಶಾಸಕರು ಮತ್ತೆ ವಾಪಸ್ ಬಂದರೆ ನಿಮ್ಮ ಜೊತೆ ಸೇರಿಸಿಕೊಳ್ಳುತ್ತೀರಾ ಎಂದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಮ್ಮ ಪಕ್ಷದ ಮೂವರು ಶಾಸಕರು ಯಾರು ರಾಜೀನಾಮೆ ನೀಡಿ ಹೋಗಿದ್ದಾರೆ. ಅವರನ್ನು ಪುನಃ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಈ ವೇಳೆ ಎದ್ದು ನಿಂತು ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಜನತೆಗೆ ಹಾಗೂ ಪಕ್ಷಕ್ಕೆ ದ್ರೋಹ ಬಗೆದು ಆಮಿಷಗಳಿಗೆ ಬಲಿಯಾಗಿ ಹೋಗಿರುವ ಯಾವ ಶಾಸಕರಾದರೂ ಈ ಜಗತ್ತಿಗೆ ಪ್ರಳಯವಾದರೂ ಮತ್ತೆ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ ಎಂದರು. ರಾಜೀನಾಮೆ ನೀಡಿರುವ ಶಾಸಕರ ಪಾಲಿಗೆ ಈಗ ತ್ರಿಶಂಕು ಸ್ವರ್ಗ ನಿರ್ಮಾಣವಾಗಿದೆ. ನಮ್ಮನ್ನು ಬಿಟ್ಟು ಬಿಜೆಪಿಗೆ ಹೋದರೂ ಅವರು ಉಳಿಯಲು ಸಾಧ್ಯವಿಲ್ಲ. ಬಿಜೆಪಿಯಲ್ಲಿರುವ ಗರ್ಭಗುಡಿ ಸಂಸ್ಕೃತಿಯಿಂದ ಅನ್ಯ ಪಕ್ಷದಿಂದ ಹೋಗಿರುವವರು ಹಾಗೇ ಹಿಂದಿರುಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News