ರಾಜ್ಯಪಾಲರ ವಿಶೇಷಾಧಿಕಾರಿ ಸದನದೊಳಗೆ ಬರುವಂತಿಲ್ಲ: ವಾಟಾಳ್ ನಾಗರಾಜ್

Update: 2019-07-23 17:35 GMT

ಬೆಂಗಳೂರು, ಜು.23: ರಾಜ್ಯಪಾಲರ ವಿಶೇಷಾಧಿಕಾರಿಗಳು ಸದನದ ಒಳಗಡೆ ಬರುವಂತಿಲ್ಲ ಎಂದು ಕನ್ನಡ ಪರ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಅಧಿಕಾರಿಗಳನ್ನು ಸದನಕ್ಕೆ ಕಳಿಸುವುದು ತಪ್ಪು. ಕೂಡಲೇ ಸಭಾಧ್ಯಕ್ಷರು ರಾಜ್ಯಪಾಲರ ವಿಶೇಷಾಧಿಕಾರಿಗಳನ್ನು ಹೊರಕ್ಕೆ ಕಳಿಸಿ ಮುಕ್ತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ಬರಗಾಲ, ಬಡತನದ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿಲ್ಲ. ನಮ್ಮ ಶಾಸಕರಿಗೆ ಗಂಭೀರ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲ. ಅವರು ಸರಕಾರ ಉಳಿಸುವ, ಬೀಳಿಸುವ ಚಿಂತೆಯಲ್ಲಿದ್ದಾರೆ. ಅತೃಪ್ತರು ಮುಂಬೈಗೆ ತೆರಳಿ ತಿಂಗಳಾಯಿತು, ಅವರು ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಕಾಲದಲ್ಲಿ ವಿಶ್ವಾಸ, ಅವಿಶ್ವಾಸ ನಡೆದಿತ್ತು. ಆದರೆ, ಈಗಿನ ರೀತಿ ಇರಲಿಲ್ಲ. ಆದರೆ, ಸಭಾಧ್ಯಕ್ಷ ರಮೇಶ್ ಕುಮಾರ್ ಹಿರಿಯ ರಾಜಕೀಯ ಮುತ್ಸದ್ದಿಯಾಗಿದ್ದು, ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News