ಪಕ್ಷಾಂತರಿಗಳಿಗೆ ಪಾಠ ಆಗುವ ರೀತಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿ: ಹಂಗಾಮಿ ಸ್ಪೀಕರ್‌ಗೆ ಕಾಂಗ್ರೆಸ್ ಮುಖಂಡರ ಮನವಿ
ಬೆಂಗಳೂರು, ಜು. 24: ‘ಜನರಿಂದ ಆಯ್ಕೆಯಾಗಿ ಕಾರಣವಿಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪದೇ ಪದೇ ಪಕ್ಷ ತೊರೆಯುವವರಿಗೆ ಪಾಠ ಆಗುವ ರೀತಿಯಲ್ಲಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕು’ ಎಂದು ಕಾಂಗ್ರೆಸ್ ಮುಖಂಡರು, ಹಂಗಾಮಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು, ಪಕ್ಷದಿಂದ ಆಯ್ಕೆಯಾಗಿ ಬಂದ ಮೇಲೆ ಪಕ್ಷಕ್ಕೆ ನಿಷ್ಠರಾಗಿರಬೇಕು. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು. ಅದು ಇಂತದ್ದೇ ಪಕ್ಷವೆಂಬುದು ಬೇಡ. ಯಾವುದೇ ಪಕ್ಷದ ಶಾಸಕರಾದರೂ ಸರಿಯೆ ಎಂದು ಪ್ರತಿಪಾದಿಸಿದ್ದಾರೆಂದು ಗೊತ್ತಾಗಿದೆ.
ಇವತ್ತು ನಮ್ಮ ಪಕ್ಷ, ನಾಳೆ ಬೇರೆ ಪಕ್ಷಕ್ಕೂ ಇದೇ ಸ್ಥಿತಿ ಆಗಬಹುದು. ನೀವು ತೆಗೆದುಕೊಳ್ಳುವ ನಿರ್ಧಾರ ಇತಿಹಾಸ ಸೇರಬೇಕು. ನಾನು ಆ ಪಕ್ಷ, ಈ ಪಕ್ಷ ಅಂತ ಬೆರುಳು ತೋರಿಸುವುದಿಲ್ಲ. ನೀವು ಎಲ್ಲರನ್ನೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಅನರ್ಹತೆ ತೂಗುಗತ್ತಿ: ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ಬಂದಾಗ ಏಕಾಏಕಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಕೆಲ ನಿಯಮಗಳನ್ನು ಅನುಸರಿಸಬೇಕಿದ್ದು ಕೆಲ ಪ್ರಕ್ರಿಯೆಗಳ ಪೂರ್ಣಗೊಂಡ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಬೇಕಿರುತ್ತದೆ.
ಶಾಸಕರು ತಮ್ಮ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದಾಗ ಅದನ್ನು ಸ್ಪೀಕರ್ ತಮ್ಮ ಪರಿಮಿತಿಯಲ್ಲಿ ಅದನ್ನು ಸ್ವೀಕರಿಸಬೇಕೆಂದು ಸಂವಿಧಾನದಲ್ಲೇ ಹೇಳುತ್ತದೆ. ಅದನ್ನೆ ಸುಪ್ರೀಂಕೋರ್ಟ್ ಪ್ರತಿಪಾದಿಸಿದ್ದು, ಒಬ್ಬ ಶಾಸಕನ ರಾಜೀನಾಮೆ ಪಾವಿತ್ರ್ಯತೆಯನ್ನು ಕಾಪಾಡಬೇಕು. ಅವರ ಮೇಲೆ ಯಾವುದೇ ರೀತಿಯ ಬಲವಂತ ಹಾಗೂ ಒತ್ತಡ ಹೇರಬಾರದು ಎಂದು ಹೇಳುತ್ತದೆ.
ಶಾಸಕ ಸ್ಥಾನಕ್ಕೆ ಆಯ್ಕೆಯಾದ ಪಕ್ಷದಲ್ಲಿದ್ದು, ಅನ್ಯಪಕ್ಷದ ಸಭೆಗಳಲ್ಲಿ ಅಥವಾ ಸಕ್ರಿಯವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವರ ಜತೆ ಗುರುತಿಸಿಕೊಂಡರೆ ಮತ್ತು ಆ ಪಕ್ಷದ ನಾಯಕರ ಜತೆ ಸಂಭಾಷಣೆಯಲ್ಲಿ ತೊಡಗಿದರೆ ಮತ್ತಿತರ ಸಾಕ್ಷ್ಯಾಧಾರಗಳು ಇದ್ದರೆ ಅದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯಡಿ ಬರುತ್ತದೆ.
ಸ್ಪೀಕರ್‌ಗೆ ಯಾವುದೇ ಶಾಸಕ ಮೇಲುನೋಟಕ್ಕೆ ಪಕ್ಷಾಂತರ ಮಾಡುತ್ತಿದ್ದಾರೆಂಬ ಗುಮಾನಿ ಇದ್ದರೂ ಅದನ್ನು ತೋರ್ಪಡಿಸುವಂತಿಲ್ಲ. ಶಾಸಕರ ರಾಜೀನಾಮೆ ಸ್ವೀಕರಿಸಿ ಅದು ಕ್ರಮ ಬದ್ಧವಾಗಿದೆಯೇ ಎಂದು ತಿಳಿದು ಅದನ್ನು ಅಂಗೀಕರಿಸಬಹುದು ಅಥವಾ ಅವರನ್ನು ಖುದ್ದಾಗಿ ಕರೆಸಿಕೊಂಡು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೀರಾ ಎಂದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬಹುದು.
ಈ ನಡುವೆ ರಾಜೀನಾಮೆ ನೀಡುವ ಶಾಸಕರು ಅದು ಅಂಗೀಕಾರಗೊಂಡಾಗ ಆರು ವಾರಗಳ ಕಾಲ ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು ಸಚಿವ ಸ್ಥಾನ ಅಥವಾ ಸರಕಾರದ ಹುದ್ದೆಗಳನ್ನು ಸ್ವೀಕರಿಸುವಂತಿಲ್ಲ ಎಂಬುದು ಕಾನೂನು ತಜ್ಞರ ಅಭಿಮತವಾಗಿದೆ.