×
Ad

ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿಗೆ ಪ್ರವೇಶ ನಿಷೇಧ

Update: 2019-07-24 20:18 IST
ಸಾಂದರ್ಭಿಕ ಚಿತ್ರ

ಮಡಿಕೇರಿ, ಜು.24 : ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿಗೆ ತೆರಳುವ ರಸ್ತೆಯಲ್ಲಿ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆ ಪ್ರವಾಸಿಗರ ಪ್ರವೇಶವನ್ನು ಆಗಸ್ಟ್ ತಿಂಗಳ ಅಂತ್ಯದವರೆಗೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮಾಂದಲಪಟ್ಟಿ ಭಾಗದಲ್ಲಿ ಮಳೆಯಿಂದ ಭೂಕುಸಿತವಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಜಿಲ್ಲಾಡಳಿತ ತಾಂತ್ರಿಕ ಸಮಿತಿಯೊಂದನ್ನು ರಚಿಸಿ ವರದಿಯನ್ನು ನೀಡಿರುವ ಹಿನ್ನೆಲೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಕ್ರಮ ಕೈಗೊಂಡಿದ್ದಾರೆ.

ಮಾಂದಲಪಟ್ಟಿಗೆ ತೆರಳುವ ರಸ್ತೆಯ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ತೆರವುಗೊಳಿಸುತ್ತಿದ್ದರೂ ಕುಸಿತ ಮರುಕಳಿಸುತ್ತಿದೆ. ರಸ್ತೆಯು ಹಳ್ಳ ದಿಣ್ಣೆಗಳಿಂದ ಕೂಡಿದ್ದು, ರಸ್ತೆಯ ಮತ್ತೊಂದು ಬದಿಯಲ್ಲಿ ಆಳ ಪ್ರದೇಶ ಹಾಗೂ ತೋಟಗಳಿವೆ. ಹೆಚ್ಚಿನ ಮಳೆಯಾದರೆ ರಸ್ತೆ ಬದಿಯ ಗುಡ್ಡ ಕುಸಿಯುವ ಸಾಧ್ಯತೆಗಳು ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಆಗಸ್ಟ್ ತಿಂಗಳ ಅಂತ್ಯದವರೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧ ಮಾಡುವುದು ಸೂಕ್ತ ಎಂದು ತಾಂತ್ರಿಕ ಸಮಿತಿಯು ವರದಿ ಸಲ್ಲಿಸಿದೆ. 

ಆದ್ದರಿಂದ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಹೆಬ್ಬೆಟ್ಟಗೇರಿ-ದೇವಸ್ತೂರು-ಕಾಲೂರು-ಮಾಂದಲಪಟ್ಟಿ ರಸ್ತೆ ಹಾಗೂ ದೇವಸ್ತೂರು-ಮಾಂದಲಪಟ್ಟಿ ಈ ಎರಡೂ ರಸ್ತೆಗಳ ಮೂಲಕ ಮಾಂದಲಪಟ್ಟಿ ಪ್ರವಾಸಿತಾಣಕ್ಕೆ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News