ಸರಕಾರದ ಪತನಕ್ಕಿಂತ ಕುದುರೆ ವ್ಯಾಪಾರ ನೋವು ತಂದಿದೆ: ಎಚ್.ಡಿ.ದೇವೇಗೌಡ
ಬೆಂಗಳೂರು, ಜು.24: ಮೈತ್ರಿ ಸರಕಾರದ ಪತನಕ್ಕಿಂತ ರಾಜ್ಯವು ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಶಾಸಕರ ಕುದುರೆ ವ್ಯಾಪಾರ ನೋವನ್ನು ಉಂಟು ಮಾಡಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ನನಗೆ ತೀವ್ರ ನೋವು, ಆಘಾತ ಉಂಟು ಮಾಡಿದೆ. ನನ್ನ ರಾಜಕೀಯ ವೃತ್ತಿಯಲ್ಲಿ ಇಂಥ ಘಟನಾವಳಿಗಳನ್ನು ಎಂದೂ ಕಂಡಿಲ್ಲವೆಂದು ತಿಳಿಸಿದರು. ರಾಷ್ಟ್ರೀಯ ಪಕ್ಷ ಬಿಜೆಪಿ, ಆ ಪಕ್ಷದ ನಾಯಕರು, ಕುದುರೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟರು. ಇಂತಹ ಅಕ್ರಮವನ್ನು ನಾನು ನನ್ನ ಜೀವಿತಾವಧಿಯಲ್ಲಿ ನೋಡಿಲ್ಲ, ಇದರಿಂದ ನನಗೆ ನೋವಾಗಿದೆ. ಮುಂದಿನ ದಿನಗಳಲ್ಲಿ ಇವೆಲ್ಲವುಗಳಿಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಭೀರ ಚಿಂತನೆಯ ಅಗತ್ಯವಿದೆ ಎಂದು ಅವರು ಹೇಳಿದರು.
15ನೆ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್.ಡಿ ಕುಮಾರಸ್ವಾಮಿಯ ವಿಶ್ವಾಸಮತ ನಿಲುವಳಿ ಬಗ್ಗೆ ಸುದೀರ್ಘ ಚರ್ಚೆ, ಸಾಂವಿಧಾನಿಕ ಹುದ್ದೆಗಳ ಅಧಿಕಾರ, ಜನಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಸುದೀರ್ಘ ಚರ್ಚೆಯನ್ನು ನಾಡಿನ ಜನತೆ ಕಾಣುವ ಯೋಗ ಸಿಕ್ಕಿತು ಎಂದು ಅವರು ಹೇಳಿದರು.