×
Ad

ಐಎಂಎ ಬಹುಕೋಟಿ ಹಗರಣ: ಝಮೀರ್ ಅಹ್ಮದ್- ರೋಶನ್ ಬೇಗ್ ಗೆ ಸಿಟ್ ನೋಟಿಸ್

Update: 2019-07-24 22:29 IST

ಬೆಂಗಳೂರು, ಜು.24: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶಾಸಕರಾದ ಝಮೀರ್ ಅಹ್ಮದ್, ರೋಶನ್ ಬೇಗ್ ರಿಗೆ ಸಿಟ್ ನೋಟಿಸ್ ಜಾರಿ ಮಾಡಿದೆ.

ಇಬ್ಬರಿಗೂ ಜು.29 ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿಟ್ ತನಿಖಾಧಿಕಾರಿಗಳು ನೋಟಿಸ್ ನಲ್ಲಿ ಸೂಚಿಸಿದ್ದಾರೆ.

ಶಾಸಕ ರೋಶನ್ ಬೇಗ್ ಐಎಂಎ ಸಂಸ್ಥೆಯಿಂದ 400 ಕೋಟಿ ರೂ. ಪಡೆದಿರುವುದಾಗಿ ಆರೋಪಿ ಮನ್ಸೂರ್ ಖಾನ್ ಆಡಿಯೋದಲ್ಲಿ ಆರೋಪಿಸಿದ್ದ. ಅಲ್ಲದೆ, ಶಾಸಕ ಝಮೀರ್ ಅಹ್ಮದ್ ಹೆಸರನ್ನು ಕೂಡ ಹೇಳಿದ್ದ. ಆ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸಿಟ್ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆ: ಈ.ಡಿ. ಅಧಿಕಾರಿಗಳ ವಶದಲ್ಲಿರುವ ಆರೋಪಿ ಮನ್ಸೂರ್ ಖಾನ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

'ದೂರು ನೀಡಿದರೆ, ತನಿಖೆ'

ಐಎಂಎ ಸಂಸ್ಥೆಯ ಬಹುಕೋಟಿ ಹಗರಣ ಸಂಬಂಧ ಆದಾಯ ತೆರಿಗೆ ಇಲಾಖೆಗೆ, ವಂಚನೆಗೊಳಗಾದವರು ಅಧಿಕೃತ ದೂರು ಸಲ್ಲಿಸಿದರೆ, ತನಿಖೆ ನಡೆಸಲು ಸಿದ್ಧವಿರುವುದಾಗಿ ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ಮತ್ತು ತನಿಖಾ ವಿಭಾಗದ ನಿರ್ದೇಶಕ ಬಿ.ಆರ್‌ ಬಾಲಕೃಷ್ಣನ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಹಗರಣದ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಸರಕಾರದ ವಿಶೇಷ ತನಿಖಾ ದಳ (ಸಿಟ್) ತನಿಖೆ ನಡೆಸುತ್ತಿವೆ. ಇದರ ನಡುವೆ ಯಾರಾದರೂ ಆದಾಯ ತೆರಿಗೆ ಇಲಾಖೆಗೂ ದೂರು ನೀಡಿದರೆ ನಾವೂ ಕೂಡ ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಪ್ರಾದೇಶಿಕ ಆಯುಕ್ತರೇ ಸಕ್ಷಮ ಪ್ರಾಕಾರ

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಕ ಮಾಡಿದೆ.

ಈ ಹಿಂದೆ ಹಣಕಾಸು ಅವ್ಯವಹಾರ ತಡೆಗಟ್ಟಲು ಬೆಂಗಳೂರು ನಗರ ಜಿಲ್ಲಾಕಾರಿಯನ್ನು ಸಕ್ಷಮ ಪ್ರಾಧಿಕಾರ ಅಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಆದರೆ, ಐಎಂಎ ವಂಚನೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಆರೋಪ ಇದ್ದು, ಸದ್ಯ ಅವರು ಬಂಧನದಲ್ಲಿದ್ದಾರೆ.

ಅಲ್ಲದೇ ಐಎಂಎ ವಂಚನೆ ಪ್ರಕರಣ ಬರೀ ಬೆಂಗಳೂರಿಗಷ್ಟೆ ಅಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ವಂಚನೆ ಆಗಿರುವುದರಿಂದ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ಮತ್ತೋರ್ವ ಬಂಧನ

ಐಎಂಎ ವಂಚನೆ ಪ್ರಕರಣದಲ್ಲಿ ನಕಲಿ ದಾಖಲಾತಿ ಹಾಗೂ ತಪ್ಪು ಅಂಕಿ-ಅಂಶಗಳನ್ನು ಸೃಷ್ಠಿಸಿ, ಅದನ್ನು ಆದಾಯ ತೆರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರೆ ಇಲಾಖೆಗಳಿಗೆ ನೀಡಿದ್ದ ಸಂಸ್ಥೆಯ ಲೆಕ್ಕಪರಿಶೋಧಕ ಇಕ್ಬಾಲ್ ಖಾನ್(72)ಎಂಬಾತನನ್ನು ಸಿಟ್ ಬುಧವಾರ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News