ಮೈಸೂರು: ಒಂಬತ್ತನೇ ದಿನಕ್ಕೆ ಕಾಲಿಟ್ಟ ದಸಂಸ ಅಹೋರಾತ್ರಿ ಧರಣಿ

Update: 2019-07-24 18:10 GMT

ಮೈಸೂರು,ಜು.24: ರಾಜ್ಯ ಸರಕಾರದ ಡಾ.ಬಿ.ಆರ್.ಅಂಭೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಪ್ರವಾಸಿ ಟ್ಯಾಕ್ಸಿಯಲ್ಲಿ ಬಾರೀ ಭ್ರಷ್ಟಾಚಾರ ನಡೆದಿದ್ದು, ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರುಗಳನ್ನು ವಿತರಣೆ ಮಾಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಎಂಟನೆ ದಿನವಾದ ಬುಧವಾರವೂ ಮುಂದುವರೆದಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. 

ನಗರದ ಟಿ.ಕೆ.ಲೇಔಟ್ ನಲ್ಲಿರುವ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಚೇರಿ ಮುಂಭಾಗ ಪೆಂಡಾಲ್ ಹಾಕಿ ಕಳೆದ ಎಂಟು ದಿನಗಳಿಂದಲೂ ಫಲಾನುಭವಿಗಳು ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದೇ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡ ಎಡೆದೊರೆ ಮಹದೇವಯ್ಯ ಮಾತನಾಡಿ, ಕಳೆದ ಎಂಟು ದಿನಗಳಿಂದಲೂ ನಾವುಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ನಿಮಗದ ಹಿರಿಯ ಅಧಿಕಾರಿಗಳು ಸದ್ಯಕ್ಕೆ 65 ಜನರಿಗೆ ಪ್ರವಾಸಿ ಟ್ಯಾಕ್ಸಿ ವಿತರಣೆ ಮಾಡುವುದಾಗಿ ಮಂಗಳವಾರ ಹೇಳಿದ್ದರು. ಆದರೆ ಇದುವರೆಗೂ ವಿತರಣೆಯಾಗಿಲ್ಲ. ಅವರು ಹೇಳಿದಂತೆ ಕೂಡಲೇ ಟ್ಯಾಕ್ಸಿ ವಿತರಣೆ ಮಾಡಿದರೆ ಮಾತ್ರ ನಾವು ಧರಣಿ ವಾಪಸ್ ಪಡೆಯುತ್ತೇವೆ. ಬರೀ ಭರವಸೆಯಾದರೆ ಎಷ್ಟೇ ದಿನಗಳಾದರೂ ಧರಣಿಯನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ಎಡೆದೊರೆ ಮಹದೇವಯ್ಯ, ಶಿವರಾಜು, ಮೂಡಹಳ್ಳಿ ಮಹದೇವ, ಶಿವಮೂರ್ತಿ, ಮುಡುಗಳ್ಳಿ ಮಹದೇವ, ಫಲಾನುಭವಿಗಳಾದ ಸಂತೋಷ್ ತಳೂರು, ದೇವರಾಜು ಬಿಳಿಕೆರೆ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News