ಮಧ್ಯಂತರ ಚುನಾವಣೆ ನಿರೀಕ್ಷೆಯಲ್ಲಿ ಕಾಂಗ್ರೆಸ್ ?

Update: 2019-07-25 11:43 GMT

ಬೆಂಗಳೂರು, ಜು. 25: ಮೈತ್ರಿ ಸರಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಮಧ್ಯೆ ಬಿಜೆಪಿ ಸರಕಾರ ರಚನೆಗೆ ಕಸರತ್ತು ನಡೆಸಿದ್ದರೆ, ಕಾಂಗ್ರೆಸ್ ಮಧ್ಯಂತರ ಚುನಾವಣೆ ಎದುರಾಗಲಿದ್ದು ಅದಕ್ಕೆ ಸಿದ್ದರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದೆ.

ಗುರುವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ಬಿ.ಕೆ.ಹರಿಪ್ರಸಾದ್, ವೆಂಕಟರಮಣಪ್ಪ, ಧ್ರುವನಾರಾಯಣ್ ಸೇರಿದಂತೆ ಹಿರಿಯ ಮುಖಂಡರು ಸಮಾಲೋಚನೆ ನಡೆಸಿದರು.

ಮಧ್ಯಂತರ ಚುನಾವಣೆ: ನಮ್ಮ ಸರಕಾರ ಬಹುಮತ ಕಳೆದುಕೊಂಡಿದ್ದು ಸರಕಾರ ರಚನೆಗೆ ಬಿಜೆಪಿ ತುದಿಗಾಲ ಮೇಲೆ ನಿಂತಿದೆ. ಆದರೆ, ಅದು ಅಷ್ಟು ಸುಲಭವೇನಲ್ಲ. ಮುಂಬೈನಲ್ಲಿರುವ ಒಬ್ಬೊಬ್ಬೆ ಶಾಸಕರನ್ನು ಹೊರಗೆ ಕಳುಹಿಸುತ್ತಿದ್ದು ನನ್ನ ಹೆಸರನ್ನೇ ಹೇಳುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲು ಮುಂದಾಗಿದ್ದಾರೆ. ಈಗಾಗಲೇ ಮುಂಬೈಗೆ ಹೋಗಿದ್ದವರು ಬೇಸತ್ತಿದ್ದು, ಅಲ್ಲಿಗೆ ಏಕಾದರೂ ಹೋಗಿದ್ದೆವೊ, ನಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕ ಸೃಷ್ಟಿಯಾಗಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆಂದು ಗೊತ್ತಾಗಿದೆ.

ಬಿಜೆಪಿ ಸರಕಾರ ರಚಿಸಿದರೂ ಪಕ್ಷ ತೊರೆದವರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಮೂಲ ಬಿಜೆಪಿಯವರು ಸುಮ್ಮನೆ ಇರುವುದಿಲ್ಲ. ಅಲ್ಲಿಯೂ ಒಳಜಗಳ ಆರಂಭ ವಾಗಲಿದೆ. ಜು.30ರೊಳಗೆ ಸರಕಾರ ರಚನೆಯಾಗದಿದ್ದರೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ನುಡಿದಿದ್ದಾರೆಂದು ಹೇಳಲಾಗಿದೆ.

ನನ್ನ ಪ್ರಕಾರ ಮಧ್ಯಂತರ ಚುನಾವಣೆ ಬಂದೇ ಬರುತ್ತದೆ. ಹೀಗಾಗಿ ಎಲ್ಲರೂ ಚುನಾವಣೆಯತ್ತ ಗಮನಹರಿಸಿ. ನಮಗೆ ಮತ್ತೆ ಅಧಿಕಾರಕ್ಕೆ ಬರುವ ಅವಕಾಶಗಳು ಹೆಚ್ಚಿವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಸಿದ್ದರಾಮಯ್ಯ ಮುಖಂಡರಿಗೆ ಸಲಹೆ ಮಾಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News