ಕಬ್ಬಿನ ಬೆಂಬಲ ಬೆಲೆ ಹೆಚ್ಚಳ ಅವೈಜ್ಞಾನಿಕ: ಕೋಡಿಹಳ್ಳಿ ಚಂದ್ರಶೇಖರ್

Update: 2019-07-25 17:09 GMT

ಬೆಂಗಳೂರು, ಜು.25: ಕೇಂದ್ರ ಸಚಿವ ಸಂಪುಟವು ಕಬ್ಬಿನ ಬೆಂಬಲ ಬೆಲೆ ಹೆಚ್ಚಳ ಮಾಡಿ ಕೈಗೊಂಡಿರುವ ನಿರ್ಣಯವು ಅವೈಜ್ಞಾನಿಕವಾದುದು ಎಂದು ರಾಜ್ಯ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಸಚಿವ ಸಂಪುಟದಲ್ಲಿ ಪ್ರತಿಟನ್ ಕಬ್ಬಿಗೆ 275 ರೂ.ಗಳನ್ನು ಹೆಚ್ಚು ಮಾಡಿ ಮುಂದಿನ ಕಬ್ಬು ಕಟಾವಿಗೆ ಘೋಷಣೆ ಮಾಡಲಾಗಿದೆ. ಆದರೆ, ಈ ದರವು ಅವೈಜ್ಞಾನಿಕವಾಗಿದ್ದು, ಇದಕ್ಕೆ ಸರಿಯಾದ ಮಾನದಂಡವನ್ನು ಅನುಸರಿಸಿಲ್ಲ. ದೇಶದ ಮಾರುಕಟ್ಟೆಗೆ ಅವಶ್ಯಕತೆ ಇರುವ ಸಕ್ಕರೆಯು 26 ಮಿಲಿಯನ್ ಟನ್ನುಗಳಷ್ಟಿದೆ. ಆದರೆ, ದೇಶದಲ್ಲಿ 2018-19ರ ಸಾಲಿನಲ್ಲಿ ಉತ್ಪಾದನೆಯಾದ ಸಕ್ಕರೆ 32.95 ಮಿಲಿಯನ್ ಟನ್ ಆಗಿದೆ. ಆದರೆ, ಸರಕಾರವು ಯಾವ ಮಾನದಂಡದ ಮೇಲೆ ನಿಗದಿ ಮಾಡಬೇಕು ಎಂಬುದನ್ನು ಚರ್ಚಿಸದೇ ಕೈಗೊಂಡಿರುವ ನಿರ್ಣಯ ಸರಿಯಿಲ್ಲ.

ಈಗಾಗಲೇ ಕಾರ್ಖಾನೆಗಳು ಕೊಡಬೇಕಾಗಿರುವ ಕಬ್ಬಿನ ಬಾಕಿಯ ಹಣದ ಬಗ್ಗೆ ಚರ್ಚಿಸದೆ ಕೇವಲ ಎಫ್‌ಆರ್‌ಪಿ ಅನ್ನು ಘೋಷಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಪ್ರತಿ ಟನ್‌ಗೆ ಕನಿಷ್ಠ 3,600 ರೂ. ಇರಬೇಕು ಎಂಬುದು ರೈತರ ಒತ್ತಾಯವಾಗಿದೆ. ಕೇಂದ್ರ ಸರಕಾರಕ್ಕೆ ಕಾರ್ಖಾನೆಗಳ ಮಾಲಕರ ಬಗ್ಗೆ ಇರುವ ಪ್ರೀತಿ ರೈತರ ಮೇಲೆ ಇಲ್ಲ ಎಂಬುದು ಕಾಣುತ್ತಿದೆ. ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ 5 ಸಾವಿರ ಕೋಟಿ ರೂ.ಗಳನ್ನು ಸಹಾಯ ಧನವಾಗಿ ನೀಡಿರುತ್ತದೆ. ಈಗ ಕನಿಷ್ಠ 275 ರೂ.ಗಳನ್ನು ನೀಡಿ ರೈತರನ್ನು ಗೇಲಿ ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News