ಒಂದೆರಡು ದಿನಗಳೊಳಗೆ ಬಿಜೆಪಿಯಿಂದ ಹಕ್ಕು ಮಂಡನೆ, ಯಡಿಯೂರಪ್ಪ ಮುಂದಿನ ಸಿಎಂ

Update: 2019-07-26 05:13 GMT

ಬೆಂಗಳೂರು: ಕರ್ನಾಟಕದಲ್ಲಿ ನೂತನ ಸರಕಾರ ರಚಿಸಲು ಬಿಜೆಪಿ ಒಂದೆರಡು ದಿನಗಳಲ್ಲಿ ಹಕ್ಕು ಮಂಡಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕದ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಉಲ್ಲೇಖಿಸಿ ‘theprint.in’ ವರದಿ ಮಾಡಿದೆ.

ಕರ್ನಾಟಕದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಮಂಗಳವಾರ ವಿಶ್ವಾಸಮತಯಾಚನೆಯಲ್ಲಿ ಸೋತು ಪತನಗೊಂಡ ಬಳಿಕ ಬಿಜೆಪಿ ಸರಕಾರ ರಚನೆಗೆ ಕ್ಷಣಗಣನೆ ಆರಂಭವಾಗಿತ್ತು. ಆದರೆ ಮೈತ್ರಿ ಸರಕಾರ ಪತನವಾಗಿ ಎರಡು ದಿನ ಕಳೆದರೂ ನೂತನ ಸರಕಾರ ರಚಿಸಲು ಮುಂದಾಗಲು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿರಲಿಲ್ಲ. ಹಾಗಾಗಿ ರಾಜ್ಯ ರಾಜಕೀಯ ವಲಯದಲ್ಲಿ ಮತ್ತು ಬಿಜೆಪಿ ಪಾಳಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಆದರೆ ಮುರಳೀಧರ್ ರಾವ್ ಅವರು ಗುರುವಾರ ಸಂಜೆ ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. “ ನಾವು ಸರಕಾರ ರಚಿಸಲೇಬೇಕು. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ ಸರಕಾರ ರಚನೆಗೆ ಸಂಬಂಧಿಸಿದ ಕೆಲವು ಸಂಕೀರ್ಣಗಳನ್ನು ಸರಿಯಾಗಿ ನಿಭಾಯಿಸಬೇಕಾಗಿದೆ. ಅದಕ್ಕಾಗಿ ಪಕ್ಷದ ವರಿಷ್ಟರು ಎಲ್ಲರೊಂದಿಗೆ ಸಮಾಲೋಚಿಸುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುರಳೀಧರ್ ರಾವ್ ಹೇಳಿದ್ದಾರೆ.

ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಳೆದ ಚುನಾವಣೆಯಲ್ಲಿ ನಾವು ಘೋಷಿಸಿದ್ದೇವೆ. ಈಗ ಶಾಸಕಾಂಗ ಪಕ್ಷದ ನಾಯಕ ಆಯ್ಕೆಯಾಗುವಾಗ ಈ ಬಗ್ಗೆ ಚರ್ಚಿಸುತ್ತೇವೆ. ಯಡಿಯೂರಪ್ಪ ಅವರಲ್ಲದೆ ಮುಖ್ಯಮಂತ್ರಿ ಹುದ್ದೆಗೆ ಬೇರೆ ನಾಯಕರಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಬಗ್ಗೆ ಶೀಘ್ರವೇ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News