ತರಕಾರಿ ಬಳಸುವ ಮುನ್ನ ಇದನ್ನು ಓದಲೇಬೇಕು..

Update: 2019-07-26 04:53 GMT

ಹೊಸದಿಲ್ಲಿ, ಜು.26: ರಾಜಧಾನಿಯಲ್ಲಿ ಮಾರಾಟವಾಗುವ ಬಹುತೇಕ ತರಕಾರಿಗಳು ವಿಷಯುಕ್ತ ಎನ್ನುವ ಆತಂಕಕಾರಿ ಅಂಶ ಬಹಿರಂಗವಾಗಿದೆ. ಯಮುನಾ ನದಿ ದಂಡೆಯಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಧಿಕ ಪ್ರಮಾಣದ ಸೀಸದ ಅಂಶ ಇದೆ. ಇದನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಕ್ಯಾನ್ಸರ್ ಸೇರಿದಂತೆ ಹಲವು ರೋಗ ಬರುವ ಸಾಧ್ಯತೆ ಇದ್ದು, ಇದು ಅಂಗಾಂಗಗಳಿಗೂ ಹಾನಿ ಮಾಡಬಲ್ಲದು ಎಂದು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಈ ತರಕಾರಿಗಳನ್ನು ರಾಜಧಾನಿಯ ಅಝಾದ್‌ಪುರ, ಗಾಝಿಪುರ ಮತ್ತು ಓಕ್ಲಾದ ಮಂಡಿಗಳಿಗೆ ಸಾಗಿಸಿ, ನಗರದಾದ್ಯಂತ ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ; ವಾರದ ಸಂತೆಗಳಲ್ಲೂ ಇದು ಮಾರಾಟವಾಗುತ್ತಿವೆ. ವ್ಯಾಪಕವಾಗಿ ಪೂರ್ವದಿಲ್ಲಿಯಲ್ಲಿ ಇಂಥ ತರಕಾರಿ ಮಾರಲ್ಪಡುತ್ತದೆ.

ಪೂರ್ವ ದಿಲ್ಲಿಯ ಗೀತಾ ಕಾಲನಿಯಲ್ಲಿ ಸಂಗ್ರಹಿಸಲಾದ ಕೊತ್ತಂಬರಿ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಸೀಸ ಕಲ್ಮಶ ಕಂಡುಬಂದಿದೆ. ಕ್ಯಾಬೇಜ್ ಹೊರತುಪಡಿಸಿ ಎಲ್ಲ ತರಕಾರಿಗಳಲ್ಲೂ ಸಾಮಾನ್ಯಮಟ್ಟಕ್ಕಿಂತ ಅಧಿಕ ಪ್ರಮಾಣದ ಸೀಸದ ಅಂಶ ಕಂಡುಬಂದಿದೆ. ಪಾಲಕ್ ಸೊಪ್ಪಿನಲ್ಲಿ ಗರಿಷ್ಠ (ಪ್ರತಿ ಕೆಜಿಗೆ 14.1 ಮಿಲಿಗ್ರಾಂ) ವಿಷಕಾರಿ ಅಂಶ ಕಂಡುಬಂದಿದೆ. ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿರುವಂತೆ ತರಕಾರಿಗಳಲ್ಲಿ ಇರಬಹುದಾದ ಗರಿಷ್ಠ ಸೀಸದ ಪ್ರಮಾಣ ಪ್ರತಿ ಕೆ.ಜಿ.ಗೆ 2.5 ಮಿಲಿಗ್ರಾಂ. ಆದರೆ ದಿಲ್ಲಿಯಲ್ಲಿ ಸಂಗ್ರಹಿಸಿರುವ ಮಾದರಿಗಳಲ್ಲಿ 2.8 ಮಿಲಿಗ್ರಾಂನಿಂದ ಹಿಡಿದು 13.8 ಮಿಲಿಗ್ರಾಮ ವರೆಗೂ ವಿಷಕಾರಿ ಅಂಶಗಳು ಪತ್ತೆಯಾಗಿವೆ.

"ಉಸ್ಮಾನ್‌ಪುರ, ಮಯೂರ್ ವಿಹಾರ ಹಾಗೂ ಗೀತಾ ಕಾಲನಿಯ ವಿವಿಧೆಡೆಗಳಲ್ಲಿ ಚಳಿಗಾಲದ ಏಳು ತರಕಾರಿಗಳ ಮಾದರಿ ಸಂಗ್ರಹಿಸಲಾಗಿದೆ. ಸೀಸ, ಪಾದರಸ, ನಿಕ್ಕೆಲ್ ಮತ್ತು ಕ್ಯಾಡ್ಮಿಯಂ ಪರೀಕ್ಷೆ ನಡೆಸಲಾಗಿದೆ. ಸತುವಿನ ಅಂಶ ಎಲ್ಲ ತರಕಾರಿಗಳಲ್ಲೂ ಅನುಮತಿ ನೀಡಲಾದ ಮಟ್ಟಕ್ಕಿಂತ ಅಧಿಕ ಇದೆ. ಉಳಿದ ಲೋಹಗಳ ಪ್ರಮಾಣ ಸೀಮಿತ ಮಿತಿಯಲ್ಲೇ ಇದೆ" ಎಂದು ನೀರಿ ಮುಖ್ಯಸ್ಥ ಮತ್ತು ಪ್ರಧಾನ ವಿಜ್ಞಾನಿ ಎಸ್.ಕೆ.ಗೋಯಲ್ ಹೇಳಿದ್ದಾರೆ.

2019ರ ಫೆಬ್ರುವರಿಯಲ್ಲಿ ಈ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನ ವರದಿಯನ್ನು ಕಳೆದ ಮೇ ತಿಂಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News