73ನೇ ಸ್ವಾತಂತ್ರೋತ್ಸವ: ರಾಜ್ಯ ರಾಜಧಾನಿಯಲ್ಲಿ ಬಿಗಿ ಪೊಲೀಸ್ ಭದ್ರತೆ

Update: 2019-07-26 17:03 GMT
ಅಲೋಕ್‌ ಕುಮಾರ್

ಬೆಂಗಳೂರು, ಜು.26: 73ನೇ ಸ್ವಾತಂತ್ರೋತ್ಸವ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರ ವಹಿಸಿ ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್ ಹೇಳಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸುವ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮ ನಡೆಯುವ ವೇಳೆ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವುದರೊಂದಿಗೆ ಸೂಕ್ತ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಸೌಲಭ್ಯ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.

ಆ.15 ರಂದು ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಗಾಗಿ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಇನ್ನು ಈ ಭಾಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಜೊತೆಗೆ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಸಂಚಾರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದರು.

ಪೊಲೀಸ್ ಸಿಬ್ಬಂದಿ,ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಆ.9 ರಿಂದ ಮೂರು ದಿನಗಳ ಕಾಲ ಪೂರ್ವಸಿದ್ದತಾ ಪಥ ಸಂಚಲನ ತಾಲೀಮನ್ನು ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ನಡೆಸಲಿದ್ದಾರೆ. ಅದೇ ರೀತಿ, ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News