ತಡರಾತ್ರಿಯ ದೂರವಾಣಿ ಸಂಭಾಷಣೆಯಲ್ಲಿ ಅಮಿತ್ ಶಾಗೆ ಯಡಿಯೂರಪ್ಪ ಹೇಳಿದ್ದೇನು ?

Update: 2019-07-26 17:10 GMT
ಫೈಲ್ ಚಿತ್ರ

ಬೆಂಗಳೂರು, ಜು. 26 : ಶುಕ್ರವಾರ ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಇದಕ್ಕಾಗಿ ಭಾರೀ ಶ್ರಮವನ್ನೇ ಹಾಕಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಉರುಳಿದರೂ ಬಿಎಸ್‌ವೈ ಅವರ ಮತ್ತೆ ಮುಖ್ಯಮಂತ್ರಿ ಯಾಗುವ ಕನಸಿಗೆ ಕಲ್ಲು ಬೀಳುವ ಸಾಧ್ಯತೆ ಕಂಡು ಬಂದಿತ್ತು. ಅತೃಪ್ತರ ಬಗ್ಗೆ ನಂಬಿಕೆ ಇಲ್ಲದಿದ್ದ ಹಾಗು ಮತ್ತೆ ಸರಕಾರ ರಚಿಸಿ ಈ ಹಿಂದಿನಂತೆ ಮುಖಭಂಗ ಅನುಭವಿಸಬಾರದು ಎಂದು ನಿರ್ಧರಿಸಿದ್ದ ಅಮಿತ್ ಶಾ ಈ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದ್ದರು. 

ಆದರೆ ಹೇಗಾದರೂ ಸಿಎಂ ಆಗಿಯೇ ಸಿದ್ದ ಎಂದು ನಿರ್ಧರಿಸಿದ್ದ ಯಡಿಯೂರಪ್ಪ ಅದಕ್ಕಾಗಿ ಶತಪ್ರಯತ್ನ ಮಾಡಿ ಕೊನೆಗೂ ಪಕ್ಷದ ವರಿಷ್ಠರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲು ಶಾ ಜೊತೆ ಮಾತನಾಡಿ ಒಪ್ಪಿಸಲು ರಾಜ್ಯ ನಾಯಕರ ನಿಯೋಗವೊಂದನ್ನು ದಿಲ್ಲಿಗೆ ಕಳಿಸಿದ ಯಡಿಯೂರಪ್ಪ ಇಲ್ಲಿ ಸುಮ್ಮನೆ ಕೂರದೆ ದೇವರನ್ನು ಒಲಿಸಿಕೊಳ್ಳಲು ಸರ್ವಪ್ರಯತ್ನ ಶುರು ಮಾಡಿದರು. ಹಲವು ಪೂಜೆ , ಹೋಮ, ಹವನಗಳು ನಡೆದವು. ಜ್ಯೋತಿಷ್ಯರು, ಸಂಖ್ಯಾಶಾಸ್ತ್ರಜ್ಞರುಗಳನ್ನು ಕರೆದು ಸಮಾಲೋಚನೆ ನಡೆಸಿದರು. ತುಮಕೂರಿನ ಯಡಿಯೂರಿನಲ್ಲಿರುವ ತಮ್ಮ ಗ್ರಾಮದೇವತೆಗೆ 24 ಗಂಟೆಗಳ ಹವನ ನಡೆಯಿತು. 

ಗುರುವಾರ ತಡರಾತ್ರಿ ಅಮಿತ್ ಶಾ ಜೊತೆ ದೂರವಾಣಿಯಲ್ಲಿ ಮಾತನಾಡಿದ ಯಡಿಯೂರಪ್ಪ "ಇದು ನನಗೆ ಸಿಎಂ ಆಗುವ ಕೊನೆಯ ಅವಕಾಶ" ಎಂದು ವಿನಂತಿಸಿಕೊಂಡರು. ಜೊತೆಗೆ ಅವರ ಆಪ್ತರಾದ ಸಂಸದೆ ಶೋಭಾ ಕರಂದ್ಲಾಜೆ ಅವರು ದಿಲ್ಲಿಯಲ್ಲಿ ಶಾ ಅವರನ್ನು ಪಟ್ಟು ಬಿಡದೆ ಹಿಂಬಾಲಿಸಿ ಕರ್ನಾಟಕದಲ್ಲಿ ಸರಕಾರ ರಚನೆಗೆ ಅವಕಾಶ ಕೊಡಿ ಎಂದು ದುಂಬಾಲು ಬಿದ್ದರು. ಕೊನೆಗೆ "ನನಗೆ ಮಾಡಲು ಬೇರೆ ತುರ್ತು ಕೆಲಸಗಳು ಇವೆ, ಹಾಗಾಗಿ ಕರ್ನಾಟಕ ವಿಚಾರ ಇನ್ನೂ ಸರಿಯಾಗಿ ಪರಿಶೀಲಿಸಿಲ್ಲ" ಎಂದು ಶಾ, ಶೋಭಾಗೆ ಹೇಳಿದರು ಎಂದು ದಿಲ್ಲಿ ಪತ್ರಕರ್ತರು ವರದಿ ಮಾಡಿದ್ದಾರೆ. 

ಕೊನೆಗೂ ವರಿಷ್ಠರ ಅನುಮತಿ ಗಳಿಸಿದ ಯಡಿಯೂರಪ್ಪ ಶುಕ್ರವಾರ ಬೆಳಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸುವ ಹಕ್ಕು ಮಂಡಿಸಿ ಸರಿಯಾಗಿ ಸಂಜೆ 6 ಗಂಟೆಗೆ ಪ್ರಮಾಣ ವಚನ ಭೋದಿಸಬೇಕು, ಅದು ನನಗೆ ಅತ್ಯಂತ ಒಳ್ಳೆಯ ಸಮಯ ಎಂದು ಜ್ಯೋತಿಷ್ಯರು ಹೇಳಿದ್ದಾರೆ ಎಂದು ತಿಳಿಸಿದರಂತೆ. ಅದರಂತೆ ಸಂಜೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News