ಸಿಎಂ ಯಡಿಯೂರಪ್ಪರಿಗೆ ವಿಶ್ವಾಸಮತ ಸಾಬೀತಿನ ಸವಾಲು

Update: 2019-07-27 14:37 GMT

ಬೆಂಗಳೂರು, ಜು. 27: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರು ಜು.29ರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಸಿದ್ಧತೆಯಲ್ಲಿ ತೊಡಗಿದ್ದು, ಗೆಲುವೋ-ಸೋಲೋ ಎಂಬ ಆತಂಕದ ಮಧ್ಯೆ ಭಾರೀ ಕುತೂಹಲ ಸೃಷ್ಟಿಸಿದೆ.

ಬಹುಮತ ಸಾಬೀತಿಗೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ ಅತೃಪ್ತ ಶಾಸಕರು ಗೈರು ಹಾಜರಿ ಹಿನ್ನೆಲೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಮುಖಂಡರಿದ್ದಾರೆ. ಈ ಮಧ್ಯೆ ಆಡಳಿತಾರೂಢ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಸೋಮವಾರವೇ ಧನವಿನಿಯೋಗ ವಿಧೇಯಕಕ್ಕೂ ಅಂಗೀಕಾರ ನಿರೀಕ್ಷೆ ಇದೆ.

ಜು.26ರ ಸಂಜೆ ನೂತನ ಸಿಎಂ ಆಗಿ ಬಿಎಸ್‌ವೈ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ವಜುಭಾಯ್ ವಾಲಾ ಅವರು ಒಂದು ವಾರದೊಳಗೆ ವಿಶ್ವಾಸಮತ ಸಾಬೀತಿಗೆ ಸೂಚನೆ ನೀಡಿದ್ದಾರೆ. ಆದರೆ, ಯಡಿಯೂರಪ್ಪ ಸೋಮವಾರವೇ ಬಹುಮತ ಸಾಬೀತುಪಡಿಸುವ ಉಮೇದಿನಲ್ಲಿದ್ದಾರೆ. ನಾಮನಿರ್ದೇಶಿಕ ಸದಸ್ಯರೊಬ್ಬರು ಸೇರಿ 225 ಸಂಖ್ಯಾಬಲದ ವಿಧಾನಸಭೆ, ಮೂರು ಮಂದಿ ಶಾಸಕರ ಅನರ್ಹತೆ ಹಿನ್ನೆಲೆಯಲ್ಲಿ ಸಂಖ್ಯಾಬಲ 222ಕ್ಕೆ ಕುಸಿದಿದೆ. ಬಹುಮತಕ್ಕೆ 111 ಸಂಖ್ಯಾಬಲ ಅಗತ್ಯವಿದೆ. ಆದರೆ, ಪಕ್ಷೇತರ ಶಾಸಕ ನಾಗೇಶ್ ಸಹಿತ ಬಿಜೆಪಿ ಬಳಿ 106 ಸಂಖ್ಯಾಬಲವಿದೆ. ಬಿಜೆಪಿ ಬಹುಮತ ಸಾಬೀತು ಹೇಗೆ ಮಾಡಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ರಾಜೀನಾಮೆ ನೀಡಿರುವ 13 ಶಾಸಕರು ಹಾಗೂ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಶ್ರೀಮಂತ ಪಾಟೀಲ್ ಭವಿಷ್ಯ ಇನ್ನೂ ಅತಂತ್ರದಲ್ಲಿದ್ದು, ರಾಜೀನಾಮೆ ನೀಡಿರುವ ಶಾಸಕ ವಿರುದ್ಧ ಸ್ಪೀಕರ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ 99 ಸಂಖ್ಯಾಬಲವಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಎಸ್ಪಿ ಶಾಸಕ ಎನ್.ಮಹೇಶ್ ಕಳೆದ ಅಧಿವೇಶನದಲ್ಲಿ ತಟಸ್ಥವಾಗಿದ್ದು, ಇದೀಗ ಅವರು ಅದೇ ನಿಲುವಿಗೆ ಅಂಟಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಯಡಿಯೂರಪ್ಪನವರು ಸೋಮವಾರ ಎದುರಾಗಲಿರುವ ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಲಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ವಿಪಕ್ಷ ಕಾಂಗ್ರೆಸ್-ಜೆಡಿಎಸ್, ಆಡಳಿತಾರೂಢ ಬಿಜೆಪಿಗೆ ತಿರುಗೇಟು ನೀಡಲು ಯಾವ ರೀತಿಯ ರಣತಂತ್ರ ಅನುಸರಿಸಲಿವೆ ಎಂಬುದು ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News